

ಗುಳೇದಗುಡ್ಡ: ಇಂದಿನ ಮಕ್ಕಳೇ ನಾಳಿನ ನಮ್ಮ ದೇಶ ಪ್ರಜೆಗಳು ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿಹಿಸಿ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳಿದರು.
ಸಮೀಪದ ನೀರಲಕೇರಿ ಗ್ರಾಮದಲ್ಲಿನ ಎಂ.ಆರ್.ಗಾಣಿಗೇರ ಶಿಕ್ಷಣ ಪ್ರತಿಷ್ಠಾನದ ಎಂ.ಆರ್. ಗಾಣಿಗೇರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಎಂ.ಆರ್.ಜಿ. 12ನೇ ವರ್ಷದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆ ಕಲಿಯವ ಆಸಕ್ತಿ, ವಿನಯ ಇರಬೇಕು. ಸತತ ಪರಿಶ್ರಮದಿಂದ, ಅಧ್ಯಯನದಿಂದ ಮಾತ್ರ ವಿದ್ಯೆ ಒಲಿಯುತ್ತದೆ ಎಂದರು.
ಶಿಕ್ಷಕರೂ ಮಕ್ಕಳಲ್ಲಿ ಆಸಕ್ತಿ ಉಂಟಾಗುವಂತೆ ಕಲಿಸಬೇಕು. ಪ್ರತಿ ಒಂದು ಕ್ಷಣವೂ ವಿದ್ಯಾರ್ಥಿಗಳ ಬದುಕಿನಲ್ಲಿ ಅಮೂಲ್ಯ. ಸಮಯವನ್ನು ಸದುಪಯೋಗ ಪಡೆಸಿಕೊಂಡು, ಮೊಬೈಲ್, ಟಿವಿ, ಇಂಟರ್‌ನೆಟ್ ನಂತಹ ತಂತ್ರಜ್ಞಾನದ ವಸ್ತುಗಳ ಬಳಕೆ ಕಡಿಮೆ ಮಾಡಿ, ಪುಸ್ತಕ, ಗ್ರಂಥಾಲಯ ಹೆಚ್ಚು ಬಳಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಎಂ.ಆರ್. ಗಾಣಿಗೇರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ್ನು ತೆರಯುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸೌಲಭ್ಯ ನೀಡುವ ಮೂಲಕ ಎಂ.ಆರ್. ಗಾಣಿಗೇರ ಪ್ರತಿಷ್ಠಾಣ ಉತ್ತಮ ಕಾರ್ಯಮಾಡಿದೆ. ಇಲ್ಲಿ ಓದಿದ ಮಕ್ಕಳು ಉನ್ನತ ಶಿಕ್ಷಣ ಪಡೆದು, ದೇಶ ಉತ್ತಮ ಪ್ರಜೆಯಾಗಿ ರೂಪಗೊಳ್ಳಲಿ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಪಿ.ಎಂ.ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಗಾಣಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಐ.ಛಬ್ಬಿ, ಪ್ರಾಚಾರ್ಯ ಬಸವರಾಜ ಗೌಡರ, ವಿದ್ಯಾರ್ಥಿ ಪ್ರತಿನಿಧಿ ಸೈಯದ್‌ಬಾಷಾ ಡೋಣಿ, ನವ್ಯಾ ಹಿರೇಮಠ ಮತ್ತಿತರರು ಇದ್ದರು.
ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.