

ಮಳವಳ್ಳಿ : ಸರ್.ಎಂ.ವಿಶ್ವೇರಯ್ಯ ಅವರಂತಹ ಮಹಾನೀಯರು ಹಾಕಿಕೊಟ್ಟ ಯೋಜನೆಗಳಿಂದ ನಮ್ಮ ದೇಶ ವಿಶ್ವ ಭೂಪಟದಲ್ಲಿ ತಲೆ ಎತ್ತಿ ನಿಲ್ಲಲು ಸಹಕಾರಿಯಾಗಿವೆ ಎಂದು ರಾಜ್ಯ ಸರ್ಕಾರದ ಆಂತರಿಕ ಲೆಕ್ಕ ಪರಿಶೋಧನೆ ಇಲಾಖೆಯ ಜಂಟಿನಿರ್ದೇಶಕ ಎಲ್.ಮುತ್ತುರಾಜ್ ತಿಳಿಸಿದರು.
ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜಗದೀಶ್ ಚಂದ್ರಬೋಸ್ ವಿಜ್ಞಾನ ಹಾಗೂ ಎಸ್.ರಾಮಾನುಜನ್ ಗಣಿತ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಹಾಗೂ ಶಿಕ್ಷಕರ ದಿನ ಮತ್ತು ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಶಿಕ್ಷಣ ಕಲಿಕೆಯ ದಿನಗಳಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಸಾಧಕರಾಗಿ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ವಿಶ್ವೇರಯ್ಯ ಅವರಂತೆ ಪೂರ್ವಯೋಜನೆಗಳ ಚಿಂತನೆಗಳನ್ನು ಮೈಗೂಡಿಸಿಕೊಂಡು ಕೆಲಸಮಾಡುವ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಾರಣರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂಜಿನಿಯರ್ ದಿನದ ಪ್ರಯುಕ್ತ ಜಿಲ್ಲಾ ಆರೋಗ್ಯ ಇಲಾಖೆ ಉಪ ವಿಭಾಗದ ಎಇಇ ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕರಾದ ಮರಿಸ್ವಾಮಿ, ನಾಗೇಂದ್ರಮೂರ್ತಿ, ವಿಜ್ಞಾನ ಶಿಕ್ಷಕ ಆರ್.ಜಿ.ಮಹದೇವಸ್ವಾಮಿ ಸೇರಿದಂತೆ ಸಹ ಶಿಕ್ಷಕ ವರ್ಗದವರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.