

ಶ್ರೀರಂಗಪಟ್ಟಣ: ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹಾಗೂ ಶಾಸಕರು ಅಧಿಕಾರದ ಮದ ಮತ್ತು ದರ್ಪದಲ್ಲಿ ಲಘುವಾದ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಮಂಡ್ಯದ ಜನ ಸ್ಮೂಕ್ಷ್ಮ ಹಾಗೂ ಭಾವಾನಾತ್ಮಕ ಮನಸ್ಥಿತಿಯವರಾಗಿದ್ದು, ದುರಾಹಂಕಾರ ಮೆರೆದರೆ ನಾವಾಗಲೀ, ನೀವಾಗಲೀ ಮಕಾಡೆ ಮಲಗಿಸುತ್ತಾರೆ ಎಂಬುದನ್ನು ಮರೆಯದಿರಿ ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಮನ್ವಯ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್‌ನವರು ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರದಲ್ಲಿ 2019ರಲ್ಲಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿದ ನನಗೆ ಹಾಗೂ ತುಮಕೂರಿನಿಂದ ಸ್ಪರ್ಧಿಸಿದ ನಮ್ಮ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ನಂಬಿಸಿ ಚುನಾವಣೆಯಲ್ಲಿ ಇವರು ಕತ್ತುಕೂಯ್ದುರು. ಆದರೆ ನಾನು ಅಂದು, ಇಂದು ಅವರ ವಿರುದ್ಧ ಯಾವುದೇ ಲಘು ಹೇಳಿಕೆ ನೀಡಿಲ್ಲ. ಅದು ನಮ್ಮ ಕುಟುಂಬ ಹಾಗೂ ಪಕ್ಷದ ಸಂಸ್ಕೃತಿಯೂ ಅಲ್ಲ. ನಾವು ಸಂಸ್ಕಾರ ಕಲಿತು ರಾಜಕೀಯ ಮಾಡುತ್ತಿದ್ದೇವೆ ಎಂದರು.
ನೂತನ ತಂತ್ರಜ್ಞಾನ ಮೂಲಕ ಚಿಕಿತ್ಸೆ : ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹೊಸ ತಂತ್ರಜ್ಞಾನದ ಮೂಲಕ ಹೃದಯಕ್ಕೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. ನಮ್ಮ ತಂದೆ ಬಳಿ ಪ್ರತಿದಿನ ಕಷ್ಟ ಹೇಳಿಕೊಂಡು ಸಾಕಷ್ಟು ಜನ ಬರುತ್ತಾರೆ. ಯಾರೋ ಗುತ್ತಿಗೆದಾರರು, ದುಡ್ಡು ಇರುವವರು ಬರುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅಣ್ಣ ತಮ್ಮನ ರೀತಿ ಕೆಲಸ ಮಾಡಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಅವರ ಪರ ಪಕ್ಷಾತೀತವಾದ ಅಲೆ ಎದ್ದಿದೆ. ಯಾರು ಮೈಮರೆಯದೇ ಕಾರ್ಯಕರ್ತರು ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಗೆಲವು ಮಂಡ್ಯ ಜಿಲ್ಲೆಯ ಜನರ ಗೆಲುವಾಗಬೇಕು ಎಂದು ಹೇಳಿದರು.
ಮಾಗಡಿ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್‌ಗೆ ಮತ ಹಾಕದೇ ಇದ್ದರೇ ಗ್ಯಾರಂಟಿ ಕ್ಯಾನ್ಸಲ್ ಮಾಡುತ್ತೇವೆ ಎಂದಿದ್ದಾರೆ. ಯಾರಾದರೂ ಇವರ ಬಳಿ ಗ್ಯಾರಂಟಿ ಕೇಳಿದ್ರಾ, ಕಳೆದ ಚುನಾವಣೆಯಲ್ಲಿ ಯಾರ ಬಗ್ಗೆನೂ ನಾನು ಲಘುವಾಗಿ ಮಾತನಾಡಿಲ್ಲ. ಆ ಸಂಸ್ಕೃತಿ ನನ್ನದಲ್ಲ. ದೇವೇಗೌಡರ ಹೋರಾಟವನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾನು ಸೇವೆ ಮಾಡುತ್ತೇನೆ. ಪ್ರತಿಯೊಬ್ಬರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಏ.4ರಂದು ಎಚ್‌ಡಿಕೆ ಅವರ ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಿಲ್ಲಾ ಕೇಂದ್ರಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಮಾತನಾಡಿ, ಭಾರತ ಸುಭದ್ರವಾಗಬೇಕೆಂದರೆ ಮೈತ್ರಿ ಕೂಟದಿಂದ 400 ಸೀಟು ಗೆಲ್ಲಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಅದಕ್ಕೆ ಮುನ್ನುಡಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಾರ್ಲಿಮೆಂಟಿಗೆ ಗೆಲ್ಲಿಸಿ ಕಳುಹಿಸಬೇಕು. ಮಂಡ್ಯದಲ್ಲಿ ಐದು ಲಕ್ಷದ ಮತಗಳ ಅಂತರಗಳಿಂದ ಗೆಲ್ಲಿಸಬೇಕು. ಆ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ಮುನ್ನಡಿ ಬರೆಯಬೇಕು ಎಂದರು.
ಈ ಚುನಾವಣೆ ಹಣವಂತರು ಮತ್ತು ಗುಣವಂತರ ನಡುವಿನ ಸಮರವಾಗಿದೆ. ರಾಜ್ಯದ ತಾಯಂದಿರ ರಕ್ಷಣೆಗೆ ಕುಮಾರಣ್ಣ ಸಾರಾಯಿ, ಲಾಟರಿ ನಿಷೇಧ ಮಾಡಿದರು. ರೈತರ ಬದುಕು ಚನ್ನಾಗಿರಲಿ ಎಂದು ಸಾಲ ಮನ್ನಾ ಮಾಡಿದರು. ಅದನ್ನ ತಾಯಂದಿರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವವರೆಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿದ್ರೆ ಮಾಡಲ್ಲ. ನಮ್ಮ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಕಾರಣಕ್ಕೆ ಪ್ರಧಾನಿ ಮೋದಿ ಕಾರಣ. 2014ರಲ್ಲಿ ಮೊದಲ ಬಾರಿಗೆ ಮೋದಿ ಅವರು ಪ್ರಧಾನಿ ಆದಾಗ ದೇವೇಗೌಡರ ಬಗ್ಗೆ ತೋರಿದ ಔದಾರ್ಯ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅದಃಪತನ ಶ್ರೀರಂಗಪಟ್ಟಣದಿಂದ ಆರಂಭವಾಗುತ್ತದೆ. ಈಗಾಗಲೇ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಕೇವಲ ಲೀಡ್‌ಗಾಗಿ ಹೋರಾಟ ಮಾತ್ರ ಎಂದರು.
ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಮಂಡ್ಯ ಅಂದರೆ ಇಂಡಿಯಾ. ಇಡೀ ದೇಶ ಮಂಡ್ಯದತ್ತ ನೋಡುತ್ತಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಅವರ ಪರವಾಗಿ ಕಾಂಗ್ರೆಸ್ ನಿಲ್ಲಬೇಕಿತ್ತು. ನಾಲೆಗಳಿಗೆ ನೀರು ಹರಿಸಬೇಕಿತ್ತು. ಮುಂದಿನ ಡಿಸೆಂಬರ್ ಒಳಗೆ ರಾಜ್ಯ ಸರ್ಕಾರ ಪತನವಾಗಿ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಸಿ ನಾರಾಯಣ್ ಗೌಡ ಮಾತನಾಡಿ, 2ಬಾರಿ ಸಿಎಂ ಆಗಿ ಉತ್ತಮ ಸೇವೆ ಸಲ್ಲಿಸಿರುವ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಅಭ್ಯರ್ಥಿಯಾಗಿದ್ದಾರೆ. ಕುಮಾರಸ್ವಾಮಿ ಅಭ್ಯರ್ಥಿ ಆಗುತ್ತಾರೆ ಎಂದರೇ ಸ್ಟಾರ್ ಚಂದ್ರು ಅಭ್ಯರ್ಥಿ ಆಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಚಳಿಜ್ವರ ಬಂದಿದೆ ಎಂದು ವಂಗ್ಯವಾಡಿದರು.
ಕಳೆದ 2024ರ ವಿಧಾನ ಸಭಾ ಚುನಾವಣೆ ವೇಳೆ ಕ್ಷೇತ್ರದಲ್ಲಿ ರಾಜಕೀಯ ವೈರಿಗಳಾಗಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಸಂಸದೆ ಸುಮಲತಾ ಬೆಂಬಲಿಗ ಮತ್ತು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಒಟ್ಟಿಗೆ ಕುಳಿತು ಚರ್ಚಿಸಿ ಗಮನ ಸೆಳೆದರು. ಶಾಸಕ ಎಚ್.ಟಿ.ಮಂಜುನಾಥ್ ಮಾತನಾಡಿದರು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಬಿಜೆಪಿ ಉಸ್ತುವಾರಿ ಸಿ.ಪಿ.ಉಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಉಪಾಧ್ಯಕ್ಷ ಟಿ.ಶ್ರೀಧರ್, ಒಕ್ಕಲಿಗರ ಸಂಘದ ನಿರ್ದೇಶಕ ನಲ್ಲಿಗೆರೆ ಬಾಲು, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ದಶರಥ್, ಮುಖಂಡರಾದ ಪೈ.ಮುಕುಂದ, ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಶ್ರೀನಿವಾಸ್, ಎಸ್.ಟಿ.ರಾಜು, ಗಂಜಾಂ ಕೃಷ್ಣಪ್ಪ, ಶಿವು, ನರಸಿಂಹೇಗೌಡ, ನಿಂಗರಾಜು, ಚೈತ್ರ , ಪೂರ್ಣೀಮಾ ಮತ್ತಿತರರಿದ್ದರು.