ಕಂಡಲ್ಲಿ ಕಸ ಚೆಲ್ಲಿದರೆ ದಂಡ

HDMC edit
Published on

ಧಾರವಾಡ: ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿರುವ ಹು-ಧಾ ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ದಂಡ ವಿಧಿಸಲು ಮುಂದಾಗಿದೆ. ನಗರ ಪ್ರದೇಶಗಳಲ್ಲಿ ತಮ್ಮಿಷ್ಟದಂತೆ ಎಲ್ಲೆಂದರಲ್ಲಿ ಕಸ ಹಾಕುವ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ದಂಡ ವಿಧಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಶುರು ಮಾಡಿದ್ದಾರೆ.

ನಗರವನ್ನು ಸುಂದರ ಹಾಗೂ ರೋಗ ಮುಕ್ತವಾಗಿಸಲು ಮಹಾನಗರ ಪಾಲಿಕೆ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದೆ. ಆದರೂ ಜನ ಮಾತ್ರ ರಸ್ತೆ ಪಕ್ಕ ಕಸ ಹಾಕುವ ಚಾಳಿ ಬಿಟ್ಟಿಲ್ಲ. ಅಲ್ಲದೆ, ಕಸ ಸಂಗ್ರಹಕ್ಕೆ ಮನೆ ಬಳಿ ಬರುವ ವಾಹನದಲ್ಲಿ ಕಸ ಹಾಕುವ ಬದಲು ರಾತ್ರಿ ಸಮಯದಲ್ಲಿ ರಸ್ತೆಗಳ ಪಕ್ಕ ಕಸ ಹಾಕುತ್ತಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಲು 5 ಸಾವಿರ ರೂ.ದಿಂದ 25 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.

ಬೃಹತ್ ತ್ಯಾಜ್ಯಕ್ಕೆ 25 ಸಾವಿರ ರೂ., ಸಾಲಿಡ್ ವೇಸ್ಟ್ ಗೆ 5 ಸಾವಿರ ರೂ. ಹಾಗೂ ಕಸ ಸುಡುವವರಿಗೆ 5 ಸಾವಿರ ರೂ. ದಂಡವಿದೆ. ವಲಯವಾರು ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ವಿುಕರು ರಾತ್ರಿ ಬಡಾವಣೆಗೆ ತೆರಳಿ ಗಮನಿಸಲು ಆರಂಭಿಸಿದ್ದಾರೆ. ಕಸ ಹಾಕುವವರ ಮಾಹಿತಿ ಪಡೆದು ಆಯಾ ವ್ಯಾಪ್ತಿ ಪೊಲೀಸರಿಗೆ ತಿಳಿಸಲಾಗುತ್ತದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಸ್ಥಳದಲ್ಲೇ ದಂಡ ನೀಡದಿದ್ದರೆ, ವಾಹನ ಸೀಜ್ ಮಾಡುವುದು, ಇಲ್ಲವೆ ದಂಡವನ್ನು ಆಸ್ತಿ ಕರದಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಮುನ್ಸಿಪಾಲಿಟಿ ಗಮನಿಸಲಿ

ಮಹಾನಗರ ಪಾಲಿಕೆ ಮನೆಗಳಿಂದ ಕಸ ಸಂಗ್ರಹಿಸುವ ಉತ್ತಮ ಕಾರ್ಯ ಮಾಡಿದೆ. ಆದರೆ, ಅದರಲ್ಲಿ ಸಾಕಷ್ಟು ಲೋಪಗಳಿದ್ದರೂ ಸರಿಪಡಿಸುತ್ತಿಲ್ಲ. ಕಸ ಸಂಗ್ರಹದ ವಾಹನಗಳು ಕೆಲ ಬಡಾವಣೆಗಳಿಗೆ ಮಧ್ಯಾಹ್ನ 12 ಗಂಟೆ ಮೇಲೆ ಆಗಮಿಸಿದರೆ, ಕೆಲವು ದಿನ ಬರುವುದೇ ಇಲ್ಲ. ಇದರಿಂದ ನಿತ್ಯ ಬೆಳಗ್ಗೆ ಬೇಗ ಕೆಲಸಕ್ಕೆ ತೆರಳುವವರು ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ತಪ್ಪಿಸಲು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಕಸ ಸಂಗ್ರಹಕ್ಕೆ ಒದಗಿಸಿ, ಬೆಳಗ್ಗೆ 10 ಗಂಟೆಯೊಳಗೆ ಕಸ ಸಂಗ್ರಹ ಪೂರ್ಣಗೊಳಿಸಲಿ. ಇದರಿಂದ ರಸ್ತೆ ಪಕ್ಕ ಕಸ ಹಾಕುವ ಕೆಲಸ ತಾನಾಗಿಯೇ ಬಂದಾಗಲಿದೆ ಎಂಬ ಅಭಿಪ್ರಾಯ ಜನರಿಂದ ಕೇಳಿಬರುತ್ತಿದೆ.

ರಸ್ತೆ ಪಕ್ಕ ಕಸ ಹಾಕದಂತೆ ಸಾಕಷ್ಟು ಎಚ್ಚರಿಕೆ ನೀಡಿದರೂ ಜನರು ಮಾತ್ರ ಕೇಳುತ್ತಿಲ್ಲ. ಹೀಗಾಗಿ, ದಂಡ ವಿಧಿಸಲಾಗುತ್ತಿದೆ. ಪಾಲಿಕೆ ಆಪ್ ಮೂಲಕ ದಂಡ ವಿಧಿಸಲಾಗುತ್ತಿದೆ. ಸ್ಥಳದಲ್ಲಿ ದಂಡ ನೀಡದಿದ್ದರೆ ಸಂಬಂಧಿಸಿದವರ ವಾಹನ ಸೀಜ್ ಮಾಡಲಾಗುವುದು. ಇಲ್ಲವಾದಲ್ಲಿ ಆಸ್ತಿ ತೆರಿಗೆಯಲ್ಲಿ ದಂಡದ ಮೊತ್ತ ಸೇರಿಸಲಾಗುವುದು.| ನವೀನ ಪರಿಸರ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net