

ಮುಂಡರಗಿ: ಬಸವಣ್ಣ ವಿಶ್ವಕ್ಕೆ ಗುರು. ಅವರು ಅನೇಕ ತತ್ವ ಸಂದೇಶಗಳನ್ನು ನೀಡಿದರು. ಕಾಯಕ, ದಾಸೋಹ ತತ್ವವನ್ನು ನೀಡಿದ್ದಾರೆ. 12ನೇ ಶತಮಾನದಲ್ಲಿ ಮೊಟ್ಟ ಮೊದಲ ಬಾರಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ತಂದರು. ಅಣ್ಣ ಬಸವಣ್ಣ ಹೇಗೆ ಬದುಕಬೇಕು ಎಂಬುದನ್ನು ಬದುಕಿ ತೋರಿಸಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಬಾಳಬೇಕು ಎಂದು ಪ್ರವಚನಕಾರ ಶ್ರೀ ನಾಗಭೂಷಣ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಭಾನುವಾರ ಜರುಗಿದ ಮಹಾತ್ಮರ ಜೀವನ ದರ್ಶನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ಬಸವಣ್ಣನವರ ಸ್ಮರಣೆ ಮಾಡಿದರೆ ಜನ್ಮ ಪಾವನವಾಗುತ್ತದೆ. ಅವರು ಬಾಳಿ ಬದುಕಿನ ನಾಡಿನಲ್ಲಿ ನಾವು ಬದುಕಿರುವುದು ಪುಣ್ಯ. ಶರಣರ ಹಾದಿಯಲ್ಲಿ ನಡೆಯಬೇಕು. ಶರಣ ತತ್ವ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು. ಅದನ್ನು ಪಾಲಿಸುವ ಮೂಲಕ ಶರಣರ ತತ್ವ ವಿಚಾರ ಉಳಿಸುವಂತಹ ಕೆಲಸ ಮಾಡಬೇಕು ಎಂದರು.
12ನೇ ಶತಮಾನದಲ್ಲಿ ಕಲ್ಯಾಣದಿಂದ ಬಸವ ತತ್ವವೂ ಎಲ್ಲೆಡೆಯೂ ಪಸರಿಸಿತು. ವಿವಿಧ ಭಾಗಗಳಿಂದ ಅನೇಕರು ಕಲ್ಯಾಣಕ್ಕೆ ಆಗಮಿಸಿ ಬಸವತತ್ವ ಅನುಸರಿಸಿದರು. ಬಸವಣ್ಣನವರು ಮಹಾನ್ ಶಕ್ತಿ. ಮಕ್ಕಳಿಗೆ ಅವರ ವಚನ ಕಲಿಸಬೇಕು. ಶರಣರ ನುಡಿಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.