

ಅರಕಲಗೂಡು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಮತದಾನದ ಅಸ್ತ್ರವನ್ನು ಬಳಸಿಕೊಂಡು ಗುಣವಂತರಿಗೆ ಮಣೆ ಹಾಕದೆ ಬಲಾಢ್ಯರು, ಭ್ರಷ್ಟಾಚಾರಿಗಳ ಪರ ಕೈ ಎತ್ತಿದರೆ ಪ್ರಜಾಪ್ರಭುತ್ವ ನಾಶವಾಗುವ ಅಪಾಯವಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಎಚ್ಚರಿಕೆ ನೀಡಿದರು.
ತಾಲೂಕಿನ ಶಿಕ್ಷಕರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದು ಆಡಳಿತ ರಂಗದ ಎಲ್ಲ ವ್ಯವಸ್ಥೆ ಲಂಗು ಲಗಾಮು ಇಲ್ಲದಂತೆ ವರ್ತಿಸುತ್ತಿದೆ. ಯಾವ ಕ್ಷೇತ್ರದಲ್ಲೂ ಸಂವಿಧಾನದ ಬದ್ಧತೆ ಉಳಿದಿಲ್ಲ. ನೈತಿಕ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿದೆ. ಮುಂದಿನ ಸಮಾಜದ ನಡೆಯ ಬಗ್ಗೆ ಆತಂಕವಾಗುತ್ತಿದೆ. ಸಂವಿಧಾನ ಆಚರಣೆಗೆ ಮಾತ್ರ ಅಲ್ಲ, ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಸಿದಿ ನಿವೃತ್ತ ಜಿಲ್ಲಾ ನ್ಯಾಯಾದೀಶ ಕೆ.ಬಿ.ಎಂ.ಪಟೇಲ್ ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿ, ಸಂವಿಧಾನ ಅರಿಯದೆ ಮನಬಂದ ರೀತಿಯಲ್ಲಿ ಸ್ವಾರ್ಥತೆಯಿಂದ ಜೀವಿಸುತ್ತಿರುವ ನಮಗೆ ಅದರ ಮಹತ್ವ ತಿಳಿದಿಲ್ಲ. ಸಂವಿಧಾನವನ್ನು ಓದಿ ತಿಳಿಯುವ ಮೂಲಕ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಖ್ಯಾತ ವಾಗ್ಮಿ ಸುಧಾ ಬರಗೂರು ಅವರು ಸಂವಿಧಾನದಿಂದ ಬಡವರ ಮತ್ತು ಮಹಿಳೆಯರ ಸಬಲೀಕರಣ ಮತ್ತು ಇತರ ವಿಷಯದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸುವ ಮೂಲಕ ಸಭೀಕರನ್ನು ತನ್ನ ಮಾತಿನ ಚಾಟಿಯಿಂದ ತನ್ನತ್ತ ಸೆಳೆದು ಹಾಸ್ಯದೊಂದಿಗೆ ಸಂವಿಧಾನವನ್ನು ಜೀವನಕ್ಕೆ ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಣನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಸವರಾಜು, ಹಿರಿಯ ವಕೀಲ ಎ.ಪಿ. ಜಯಪ್ಪ, ನಿವೃತ್ತ ಯೋಧ ಸಣ್ಣೇಗೌಡ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸೇವಾ ಪ್ರತಿನಿಧಿ ಜಯಲಕ್ಷ್ಮೀ, ಆರೋಗ್ಯ ನಿರೀಕ್ಷಕ ಆನಂದ್‌ಗೌಡ ಅವರನ್ನು ಸನ್ಮಾನಿಸಲಾಯಿತು.
ಏಕತಾರಿ ಸಾಂಸ್ಕೃತಿಕ ಸಂಸ್ಥೆ ಕಲಾವಿದ ದೇವಾನಂದ ವರಪ್ರಸಾದ್ ತಂಡದವರು ನಡೆಸಿಕೊಟ್ಟ ಸಾಂವಿಧಾನಿಕ ನೃತ್ಯ ರೂಪಕ ಜನರ ಗಮನ ಸೆಳೆಯಿತು.