

ಮುಂಡರಗಿ: ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಸುಧಾರಿಸಲು ಸಾಧ್ಯ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸತತ ಅಧ್ಯಯನ ಮಾಡಬೇಕು. ನಿರಂತರ ಅಧ್ಯಯನ ಮೂಲಕ ತಮ್ಮ ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ರದ್ಧೆಯಿಂದ, ಉತ್ಸಾಹದಿಂದ ಬುದ್ಧಿಯನ್ನು ಉಪಯೋಗಿಸಿಕೊಂಡು ಅಭ್ಯಾಸ ಮಾಡುವುದರಿಂದ ಓದಿಗೆ ಫಲ ದೊರೆಯುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಸಿ.ಎಸ್.ಅರಸನಾಳ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕ್ಷೇತ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಯುನಿವರ್ಸಲ್ ನಾಲೇಜ್ ಹಾಗೂ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಆಧಾರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆ ಬಗ್ಗೆ ಹೆಚ್ಚು ಚಿಂತಿಸದೆ ಮನಸುಕೊಟ್ಟು ಅಧ್ಯಯನ ಮಾಡುವುದು ಮುಖ್ಯ. ಪರೀಕ್ಷೆಯ ಭಯವು ಶಕ್ತಿ ಮತ್ತು ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆದ್ದರಿಂದ ಪರೀಕ್ಷೆಯ ಭಯವನ್ನು ಬಿಟ್ಟು ಚೆನ್ನಾಗಿ ಓದಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಹೊಂದಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಸಿ. ಚಕ್ಕಡಿಮಠ ಮಾತನಾಡಿ, ಮಕ್ಕಳು ಓದಿನ ಜತೆಗೆ ಬರವಣಿಗೆ ಮಾಡಬೇಕು. ಅನ್ಯ ವಿಷಯಗಳು ಮನಸನ್ನು ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದರು.
ಸೆಮಿಸಿರಿ, ವಿ.ಎಚ್. ಹೊಳೆಯಮ್ಮನವರ, ಎನ್.ಎಂ. ಕುಕನೂರ, ಎಚ್.ಎನ್. ಗೌಡ್ರ, ಮಂಜುನಾಥ ತೆಗ್ಗಿನಮನಿ, ಪರಮೇಶ ನಾಯಕ ಇತರರು ಇದ್ದರು.
ವಿ. ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ದೇವರಡ್ಡಿ ಇಮ್ರಾಪೂರ ಸ್ವಾಗತಿಸಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿದರು.