ಪ್ರವಚನ ಆಲಿಸಿದರೆ ಜೀವನ ಪಾವನ

28Athanigrameen1
Published on

ಅಥಣಿ ಗ್ರಾಮೀಣ: ಸಂತ, ಶರಣರ ನುಡಿ ಕೇಳುವುದರಿಂದ ಮನುಷ್ಯನಿಗೆ ಭಕ್ತಿ ದೊರೆಯುತ್ತದೆ. ಎಲ್ಲರೂ ಪ್ರವಚನ ಆಲಿಸುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಇಂಚಗೇರಿಮಠದ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಪರಗೊಂಡಪ್ಪ ಮುತ್ಯಾ ಹಾಗೂ ಬಸಪ್ಪ ಮಹಾರಾಜರ ಪುಣ್ಯಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಮಲಬ್ರಹ್ಮ ನಿರೂಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಗವಂತನನ್ನು ಆರಾಧಿಸುವ ಮೂಲಕ ಸಂಸ್ಕಾರ ಪಡೆದು ಪರಮಾತ್ಮನಲ್ಲಿ ಲೀನವಾಗಬೇಕು. ಸತ್ಸಂಗ, ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಯಕ್ಕಂಚಿ ಗುರುದೇವ ಆಶ್ರಮದ ಗುರುಪಾದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ಗಳಿಸಲು ಸಾಧ್ಯ.

ಪರಗೊಂಡಪ್ಪ ಮುತ್ಯಾ ಹಾಗೂ ಬಸಪ್ಪ ಮಹಾರಾಜರು ಇಂಚಗೇರಿ ಸಂಪ್ರದಾಯದ ಸಂದೇಶವನ್ನು ಅಧ್ಯಾತ್ಮದ ಮೂಲಕ ಜನರಿಗೆ ಸಾರಿದ್ದಾರೆ. ಪ್ರತಿಯೊಬ್ಬರೂ ಇವರ ಆದರ್ಶ ಪಾಲಿಸಬೇಕು ಎಂದರು.

ನಾಮದೇವ ಶರಣರು, ವಿವೇಕಾನಂದ ಹಳಿಂಗಳಿ ಮಾತನಾಡಿದರು. ಅಣ್ಣಾಸಾಹೇಬ ಬಿಸಲಾಪುರ ದಾಸಬೋಧ ವಾಚಿಸಿದರು. ನಾಗಪ್ಪ ಜತ್ತಿ, ಪಾಂಡು ಭೋಸಲೆ, ಸದಾಶಿವ ಶಿರಗೂರ, ಬಸಗೊಂಡ ಖೋತ, ನಾಗಪ್ಪ ಮಹಾರಾಜರು, ಜ್ಞಾನದೇವ ಖೋತ, ಚಂದು ಬೆಳ್ಳಂಕಿ, ಸದಾಶಿವ ಗಲಗಲಿ, ತುಕಾರಾಮ ಖೋತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net