

ಹೂವಿನಹಿಪ್ಪರಗಿ: ಪುರಾಣ ಪ್ರವಚನದ ಕಥೆಗಳಲ್ಲಿ ಮೂಡಿಬರುವ ಧಾರ್ಮಿಕ ವಾಣಿಗಳು ಒಂಥರಾ ವಿದ್ಯುತ್ ಪ್ರಸರಣ ಇದ್ದಂತೆ. ಅವು ನಮ್ಮ ಮನದಂಗಳದಲ್ಲಿ ಪ್ರಸರಿಸಿ ಅಂಧಕಾರವನ್ನು ಶುಚಿಗೊಳಿಸುತ್ತವೆ ಎಂದು ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮಿಗಳು ಹೇಳಿದರು.
ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಸಿದ್ಧಾರೂಡ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಧಾರ್ಮಿಕ ಮನೋಭಾವ ಬೆಳಸಿಕೊಳ್ಳಬೇಕು. ಜನತೆಯಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಮನಸ್ಸಿನ ಒಲವು ಮೂಡಿಬರಬೇಕು ಎಂದರು.
ಗ್ರಾಮದ ಆನಂದ ದೇವರು ಮಾತನಾಡಿ, ಭಯಮುಕ್ತ ಬದುಕಿಗಾಗಿ ಧಾರ್ಮಿಕ ಆಚರಣೆಯಲ್ಲಿ ತೊಡಗಬೇಕು. ಒಳ್ಳೆಯ ಆಚಾರ-ವಿಚಾರಗಳು ಜೀವನದ ಶ್ರೇಯಸ್ಸಿಗೆ ಪ್ರೇರಣೆಗಳಾಗಿವೆ. ಅರಿವು ಎಂಬ ಪದ ಮೈಮನ ಸ್ಪರ್ಶಿಸಿದರೆ ಸಾಕು ಜೀವನ ಪಾವನ ಎಂದರು.
ಅಮೋಘಸಿದ್ಧೇಶ್ವರ ಆಶ್ರಮದ ಸಂಗೋಗಿ ಮಹಾರಾಜರು ಮಾತನಾಡಿ, ಆಧುನಿಕ ಜೀವನದಲ್ಲಿ ಮನುಷ್ಯ ಸಂಸ್ಕೃತಿ, ಸಂಸ್ಕಾರ ಹಾಗೂ ಧರ್ಮದಿಂದ ವಿಮುಖನಾಗಿ ವಿಕಾರವಾದ ಮನಸ್ಸು ಹೊಂದುತ್ತಿರುವುದು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಶ್ರಾವಣ ಮಾಸದಲ್ಲಿ ಆಲಿಸಿದ ಜ್ಞಾನ, ಆಚರಿಸಿದ ನೀತಿ- ಆಚಾರಗಳನ್ನು ವರ್ಷಪೂರ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇಂಗಳೇಶ್ವರದ ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಗನಬಸವ ಸ್ವಾಮಿಗಳು, ಚನ್ನಬಸಯ್ಯ ಹಿರೇಮಠ, ಗ್ರಾಮದ ಮುಖಂಡರಾದ ಉದಯಕುಮಾರ ಆಲೂರ, ಗ್ರಾಪಂ ಅಧ್ಯಕ್ಷ ಅಪ್ಪು ನಾಯಕ, ಗುಂಡಣ್ಣ ಶಾಸಿಗಳು, ರಮೆಶ ನಾಯ್ಕೋಡಿ, ಎಸ್.ಆರ್.ಮಠ, ಶಂಕ್ರು ಮಾವಡಿ, ಚನ್ನು ಅಳಗುಂಡಗಿ, ಚನಬಸು ಮೇಟಿ, ಚನಬಸಪ್ಪಗೌಡ ಪಾಟೀಲ, ಚನ್ನು ಮಿಣಜಗಿ, ಮಲ್ಲು ಹಡಪದ, ಮಲ್ಲಣ್ಣ ಮೇಟಿ, ಶಂಕ್ರಪ್ಪ ಆಲೂರ, ಬಸವರಾಜ ಇಳಗೇರ, ಎನ್.ಆರ್.ಗೊರಗುಂಡಗಿ, ಮಹಾಂತೇಶ ಗೊರಗುಂಡಗಿ ಸಿದ್ಧಾರೂಡ ಬಡಿಗೇರ, ರಾಮನಗೌಡ ಮೇಟಿ, ಭೀಮರಾಯ ಅಳಗುಂಡಗಿ, ಎಸ್.ಎಚ್.ಹಿರೇಗೌಡರ ಇತರರಿದ್ದರು.