ದುಶ್ಚಟ ತೊರೆದರೆ ನೆಮ್ಮದಿ

HLK POURA 24
Published on

ಹೊಳಲ್ಕೆರೆ: ಯಾವ ವ್ಯಕ್ತಿ ದುಶ್ಚಟವನ್ನು ಹತ್ತಿರ ಸುಳಿಯದೆ ಬದುಕು ಕಟ್ಟಿಕೊಂಡಿರುತ್ತಾನೆ, ಅವನಲ್ಲಿ ನೆಮ್ಮದಿ ಇರುತ್ತದೆ ಎಂದು ಪುರಸಭೆ ಸದಸ್ಯ ಕೆ.ಸಿ.ರಮೇಶ್ ತಿಳಿಸಿದರು.

ಪುರಸಭೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ಆಯೋಜಿಸಿದ್ದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರೇ ಪಾದ ತೊಳೆಯುವ ಮೂಲಕ ಸಮಾಜದಲ್ಲಿ ಪೌರಕಾರ್ಮಿಕರ ಮಹತ್ವ ಮತ್ತು ಅವರಿಗೆ ಇರುವ ಉನ್ನತ ಗೌರವ ಕುರಿತು ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ದುರ್ವಾಸನೆ, ಗಲೀಜು ವಾತಾವರಣದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರು, ಈ ಹಿಂದೆ ದುಶ್ಚಟಗಳ ದಾಸರಾಗುತ್ತಿದ್ದರು. ಪರಿಣಾಮ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿದ್ದರು. ಆದರೆ, ಈಚೆಗೆ ಪೌರಕಾರ್ಮಿಕರು ಬದುಕಿನ ಮಹತ್ವ ಅರಿತುಕೊಳ್ಳುತ್ತಿದ್ದಾರೆ ಎಂದರು.

ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು, ಗಳಿಸಿದ ಹಣ ಉಳಿತಾಯ ಮಾಡುವಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಪರಿಣಾಮ ದುಶ್ಚಟಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಬೆರಳೆಣಿಕೆ ಮಂದಿ ಈಗಲೂ ಕುಡಿತ ಇತರ ದುಶ್ಚಟ ಅಭ್ಯಾಸ ಮಾಡಿಕೊಂಡಿದ್ದು, ಅವರು ಕೂಡ ಅವುಗಳನ್ನು ತೊರೆದು ನೆಮ್ಮದಿ ಜೀವನ ನಡೆಸಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ವಾಸಿಂ ಮಾತನಾಡಿ, ಪ್ರತಿ ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರು, ವೈಯಕ್ತಿಕ ಬದುಕಿನ ಕಡೆಯೂ ಗಮನಹರಿಸಬೇಕು. ಆರೋಗ್ಯಕ್ಕೆ ಹೆಚ್ಚು ಮನ್ನಣೆ ನೀಡಬೇಕು. ಈ ನಿಟ್ಟಿನಲ್ಲಿ ಪುರಸಭೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಸದಸ್ಯ ವಿಜಯಸಿಂಹ ಖಾಟ್ರೋತ್ ಮಾತನಾಡಿ, ಮನೆಯಲ್ಲಿ ಹಬ್ಬ ಸೇರಿ ಯಾವುದೇ ರೀತಿ ಕಾರ್ಯಕ್ರಮವಿದ್ದರೂ, ಮುಂಜಾನೆಯೇ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಹೇಳಿದರು.

ಸದಸ್ಯರಾದ ಎಚ್.ಆರ್.ನಾಗರತ್ನಾ ವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ್, ಡಿ.ಎಸ್.ವಿಜಯ, ಬಿ.ಎಸ್.ರುದ್ರಪ್ಪ, ಎಲ್.ವಿಜಯಸಿಂಹ ಖಾಟ್ರೋತ್, ಮಮತಾ ಜಯಸಿಂಹ ಖಾಟ್ರೋತ್, ಪಿ.ಎಚ್.ಮುರುಗೇಶ್ , ಆರ್.ಅಶೋಕ್, ಕೆ.ಸಿ.ರಮೇಶ್. ಶಬೀನಾ ಅಶ್ರಫ್ ಉಲ್ಲಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಪೂರ್ಣಿಮಾ ಬಸವರಾಜ್, ಸುಧಾ ಬಸವರಾಜ್, ಸವಿತಾ ನರಸಿಂಹ ಖಾಟ್ರೋತ್, ವಸಂತಾ ರಾಜಪ್ಪ, ವಕೀಲ ವೇದಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net