ಭಾಷೆ ಪ್ರೀತಿಸುವುದನ್ನು ಕಲಿತರೆ ಅದರ ನೋವು ಅರ್ಥ ಅಗುತ್ತದೆ: ಸಾಹಿತಿ ಲಕ್ಷ್ಮೀಶ ತೋಳ್ವಾಡಿ ಅಭಿಮತ

21
Published on

ಮೈಸೂರು: ನಮ್ಮ ಭಾಷೆಯ ನೋವು ತಿಳಿಯಬೇಕಾದರೆ ಅದನ್ನು ಪ್ರೀತಿಸುವುದನ್ನು ಕಲಿತಾಗ ಮಾತ್ರ ಅರ್ಥವಾಗುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಲಕ್ಷ್ಮೀಶ ತೋಳ್ವಾಡಿ ಅಭಿಪ್ರಾಯಪಟ್ಟರು.

ಶ್ರೀಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸುಸಂಸ್ಕೃತವಾದ ಕನ್ನಡ ಭಾಷೆ 12 ಶತಮಾನದಲ್ಲಿ ಬಸವಣ್ಣ, ಅಲ್ಲಮ್ಮ, ಅಕ್ಕಮಹಾದೇವಿ ಸೇರಿದಂತೆ ಇತರರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಿಂದ ಸಾಮಾಜಿಕ ಸ್ಥಿತ್ಯಂತರ ಜತೆಗೆ ಭಾಷೆಯೂ ಹೊಸತನವನ್ನು ಪಡೆದುಕೊಂಡಿತು ಎಂದರು.

ಮುಂದೆ ಪುರಂದರದಾಸ, ಕನಕದಾಸರ ರಚಿಸಿದ ಕೀರ್ತನೆಗಳಿಂದ ಭಾಷೆಯೂ ಹೊಸ ಹೊಳಪು, ಕಾಂತಿ ಪಡೆದುಕೊಂಡಿತು. ಆದ್ದರಿಂದ ಭಾಷೆಯೂ ಮನುಷ್ಯರ ಮೂಲಕವೇ ಪ್ರಕಟವಾಗಬೇಕು. ಈ ರೀತಿ ಪ್ರಕಟವಾಗಲು ಭಾಷೆಯೂ ಕಾದು ಕುಳಿತಿರುತ್ತದೆ. ಭಾಷೆಯನ್ನು ಬಳಸುತ್ತಾ ಹೋದಂತೆ ಬೆಳೆಯುತ್ತಾ ಸಾಗುತ್ತದೆ ಎಂದರು.

ಭಾಷೆ ಎನ್ನುವುದು ಘನತೆ, ಒಳನೋವು ಅರ್ಥಮಾಡಿಕೊಳ್ಳವ ಸಂವಹನ ಮಾಧ್ಯಮ. ಒಂದು ಭಾಷೆಗೆ ತನ್ನನ್ನು ತಾನು ಪೂರ್ತಿ ಪ್ರಕಟ ಮಾಡುವುದಕ್ಕೆೆ ಭಾಷೆಯನ್ನು ಪರಿಪೂರ್ಣವಾಗಿ ಪ್ರೀತಿಯಿಂದ ಬಳಸಬೇಕು. ಇದಾಗದ ಹೊರತು ಭಾಷೆಯ ನೈಜ ಸ್ವರೂಪ ಪ್ರಕಟಿಸುವುದು ಕಷ್ಟ ಎಂದು ಹೇಳಿದರು.

ಸತ್ಯವನ್ನು ಮಾತ್ರ ನಂಬಬೇಕು ಎನ್ನುವುದು ಪ್ರಜ್ಞಾಪೂರ್ವಕವಾಗಿ ಆಗಬೇಕು. ಅದಕ್ಕೆೆ ಯಾವುದೇ ತಂತ್ರಗಾರಿಕೆ ಇಲ್ಲ. ಏನು ಅಗಬೇಕಾದರೂ ಅದು ಸ್ವಾಭಾವಿಕವಾಗಿಯೇ ಆಗಬೇಕು. ಲೌಕಿಕ ಜೀವನವನ್ನು ಪರಿಪೂರ್ಣವಾಗಿ ಒಪ್ಪಿಕೊಂಡಿದ್ದ ವ್ಯಾಪಾರಿ ಪುರಂದರದಾಸರಿಗೆ ಹಣದ ಮೋಹ ಇದ್ದು, ಅದನ್ನೇ ಸತ್ಯ ಎಂದು ನಂಬಿದ್ದರು. ಆದರೆ ನಾವು ತಿಳಿದುಕೊಂಡ ಸತ್ಯದ ಆಚೆಗೂ ಮತ್ತೊಂದು ಸತ್ಯವಿದೆ ಎನ್ನುವುದು ಅವರ ಅರಿವಿಗೆ ಬಂದಾಗ ಸಿರಿಸಂಪತ್ತು ತ್ಯಜಿಸಿ, ಅಂತರಂಗದ ತಿಜೋರಿಯಲ್ಲಿದ್ದ ಹಾಡುಗಳು ಹೊರಬಂದವು ಎಂದು ಬಣ್ಣಿಸಿದರು.

ಪ್ರಸ್ತುತ ಜೀವನದಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡವರಂತೆ ಬದುಕುತ್ತಿದ್ದೇವೆ. ನಮಗಿಂತ ನಮ್ಮ ಫೋಟೊ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಬರುವುದು ಮುಖ್ಯವಾಗಿದೆ. ಆಧುನಿಕ ಪ್ರಪಂಚದಲ್ಲಿ ನಾವು ಬದುಕಿದ್ದೇವೆ ಎನ್ನುವುದನ್ನು ನಮಗೆ ಮತ್ತೊಬ್ಬರು ಹೇಳಬೇಕಾದ ದುಸ್ಥಿತಿಗೆ ತಲುಪಿಸಿ ಬಿಟ್ಟಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಚಾರಕ್ಕಾಗಿ ಪರೋಪಕಾರ ಮಾಡುವುದು ಆತ್ಮಘಾತಕತನ. ನಮ್ಮ ಜೀವನ ಸ್ಥಿತ್ಯಂತರಕ್ಕೆೆ ಒಳಗಾಗಬೇಕು. ಇಲ್ಲದಿದ್ದರೆ ಜಡವಾಗುತ್ತದೆ. ಸಮುದ್ರದ ನೀರಿನ ಮೇಲೆ ಇರುವ ಮಂಜುಗಡ್ಡೆೆಯು ಬಿಸಿಲಿನ ತಾಪಕ್ಕೆೆ ಕರಗಿ ಹರಿಯುತ್ತದೆ. ಆದರೆ ಮಂಜುಗಡ್ಡೆೆಗೆ ಮೊದಲು ನಾನೂ ಕೂಡ ನೀರಿನಂತೆಯೇ ಇದ್ದೆೆ. ಹರಿವನ್ನು ಹೊಂದಿದ್ದೆೆ ಎನ್ನುವುದು ತಿಳಿಯಬೇಕಾದರೇ ನೀರಿನ ಒಳಗಿನಿಂದ ಕರಗುವುದು ಮುಖ್ಯ ಎಂದು ವಿಶ್ಲೇಷಿಸಿದರು.

ಮನುಷ್ಯ ಪ್ರಕೃತಿಯ ಕೂಸು ಎನ್ನುವುದನ್ನು ಮರೆತು, ಮನುಷ್ಯನಿಲ್ಲದೆ ಗಿಡಮರಗಳು ಬೆಳೆಯುವುದಿಲ್ಲ, ಆತನೇ ನೀರು, ಗೊಬ್ಬರ ಹಾಕಿ ಸಂಭಾಳಿಸಬೇಕು ಎನ್ನುವ ಮೂರ್ಖತನದ ಪರಮಾವಧಿಗೆ ಬಂದು ತಲುಪಿದ್ದೇವೆ ಎಂದು ವಿಷಾದಿಸಿದರು.

ಒಂದು ಗಿಡ ಹುಟ್ಟಿದ ಮೇಲೆ ಅದು ತನ್ನ ಬೆಳವಣಿಗೆಗೆ ಏನು ಬೇಕು ಅದನ್ನು ಪ್ರಕೃತಿಯಿಂದ ಪಡೆದುಕೊಳ್ಳುತ್ತದೆ. ಮನುಷ್ಯ ಕೂಡಾ ಪ್ರಕೃತಿಯ ಒಂದು ಭಾಗವೇ ಎನ್ನುವುದನ್ನು ಮರೆತು ನನ್ನಿಂದಲೇ ಪ್ರಕೃತಿ ಎನ್ನುವ ಹಂತ ತಲುಪಿದ್ದಾನೆ ಎಂದರು.

ಪುಸ್ತಕ ಓದಿದರೆ ಅದೇ ಸನ್ಮಾನ:

ಯಾವುದೇ ಬರಹಗಾರ, ಲೇಖಕನಿಗೆ ಜನರು ಪುಸ್ತಕ ಓದಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ. ಅದು ನಿಜವಾದ ಸಂತೋಷ ಕೊಡುತ್ತದೆ ಎಂದು ಹೇಳಿದರು.

ಲೇಖಕರ ಆಲೋಚನೆಗಳು ಓದುಗರ ಆಲೋಚನೆಗಳು ಆಗಿರಬೇಕಾಗಿಲ್ಲ. ಹಾಗಾಗಿ ಪುಸ್ತಕಗಳನ್ನು ಓದಿ ಟೀಕಿಸಿದರೂ ಅಡ್ಡಿಯಿಲ್ಲ. ಸಮಾಜ ಕ್ರಿಯಶೀಲವಾಗಿರಬೇಕಾದರೆ ಸಹಮತ, ಭಿನ್ನಮತ ಇರಬೇಕು. ಯೋಚನೆಗಳು, ಚಿಂತನೆಗಳಿಂದ ಮಾತ್ರ ವಿಕಾಸ ಸಾಧ್ಯ. ಇಲ್ಲದಿದ್ದರೆ ನಮ್ಮ ಮೆದುಳು ಜಡವಾಗುತ್ತದೆ ಎಂದರು.

ಶ್ರೀಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಮಾಜಮುಖಿ ಕಾರ್ಯಕ್ಕಾಗಿ ಟ್ರಸ್ಟ್ ಆರಂಭಿಸಲಾಗಿದೆ. ನಾವು ಎಷ್ಟೇ ಕೆಲಸ ಮಾಡಿದರೂ, ಹಸಿದವರು ಊಟ ಮಾಡಿ ಆಶೀರ್ವಾದ ಮಾಡಿದಾಗ ಆಗುವ ಆನಂದ ಬೇರೊಂದಿಲ್ಲ ಎಂದರು.

ಬಹಳ ವರ್ಷಗಳ ಹಿಂದೆ ಟ್ರಸ್ಟ್ ಆರಂಭಗೊಂಡಿರುವ ಜಾಗದಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಹಾಗಾಗಿ ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನದಿಂದ ಅನ್ನ ಸಂತರ್ಪಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಶರಣ ಸಂಸ್ಕೃತಿ ಚಿಂತಕ ಶಂಕರ ದೇವನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಲೇಖಕ ಡಾ.ಎಂ.ಜಿ.ಆರ್.ಅರಸ್ ಮುಖ್ಯ ಅತಿಥಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net