

ನರೇಗಲ್ಲ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉನ್ನತ ಸ್ಥಾನ ತಲುಪಬೇಕು ಎಂದು ಎಸ್‌ಎವಿಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಸಾಂಘಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಓದಿನಿಂದಲೇ ಸಾಧನೆ ಮಾಡಬೇಕಿಲ್ಲ. ಕ್ರೀಡೆ, ನೃತ್ಯ, ಹಾಡು ಸೇರಿ ವಿವಿಧ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು. ನಿಮ್ಮಲ್ಲಿರುವ ಜ್ಞಾನದ ಶಕ್ತಿ ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ನಾಡಿನಲ್ಲಿ ಹತ್ತು ಹಲವು ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿವೆ. ಅದರಲ್ಲಿ ಶ್ರೀ ಅನ್ನದಾನೇಶ್ವರ ಮಠವೂ ಒಂದು. ಉತ್ತರ ಕರ್ನಾಟಕದ ಶಿಕ್ಷಣ ಕಾಶಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಭಾಗ್ಯವಂತರು ಎಂದರು.
ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಲ್ಲಿಕಾರ್ಜುನಪ್ಪ್ಪ ಮೆಣಸಗಿ, ಕೆ.ಎಸ್. ಅಣಗೌಡ್ರ, ಐ.ಬಿ. ಒಂಟೇಲಿ, ಕೆ.ಐ. ಕೋಳಿವಾಡ, ವಿ.ಪಿ. ಗ್ರಾಮಪೂರೋಹಿತ, ಎಸ್.ಕೆ. ಕುಲಕರ್ಣಿ, ಎಂ.ವಿ. ಕಡೆತೋಟದ, ವಿ.ಎಸ್. ಜಾಧವ, ಎಸ್.ಎಚ್. ಮಾನ್ವಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಇತರರಿದ್ದರು.