

ಮಡಿಕೇರಿ:
ವನ್ಯಜೀವಿಗಳ ಜೀವನ ಕುರಿತು ಸೂಕ್ತ ಮಾಹಿತಿ ಮತ್ತು ಅಪಾರವಾದ ತಾಳ್ಮೆಯಿದ್ದಲ್ಲಿ ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್ ಅಭಿಪ್ರಾಯಪಟ್ಟರು. ಇಲ್ಲಿನ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ನಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತನಾಡಿದರು.
ತಾನೋರ್ವ ಶಿಕ್ಷಕಿಯಾಗಿ ವನ್ಯಜೀವಿಗಳ ಕುರಿತು ಸಾಕಷ್ಟು ಕುತೂಹಲ ಹೊಂದಿದ್ದೆ, ಕಾಡು ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷದ ಬಗ್ಗೆಯೂ ಅನೇಕ ಪ್ರಶ್ನೆಗಳೂ ಮನದಲ್ಲಿದ್ದವು, ಕೆಲವೇ ವರ್ಷಗಳ ಹಿಂದೆ ಈ ಎಲ್ಲಾ ಸಂಶಯಗಳಿಗೆ ಪರಿಹಾರ ರೂಪವಾಗಿ ಅರಣ್ಯ ಜೀವಿಗಳ ಜೀವನ ಅಧ್ಯಯನ ಮಾಡಲು ಮುಂದಾಗಿದ್ದೆ, ಆಗ ಜತೆಯಾದ ಛಾಯಾಗ್ರಹಣ ಹವ್ಯಾಸವೇ ವನ್ಯಜೀವಿಗಳ ಅದ್ಬುತ ಲೋಕದತ್ತ ತನ್ನನ್ನು ಸಾಗುವಂತೆ ಮಾಡಿತು ಎಂದರು.
ಕೆಲವೊಂದು ಛಾಯಾಚಿತ್ರ ತೆಗೆಯಲು ವಾರಗಟ್ಟಲೆ ಮಾತ್ರವಲ್ಲ ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ, ಹೀಗೆ ಕಾದಾಗಲೇ ಅತ್ಯುದ್ಭುತ ಛಾಯಾಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ಹುಲಿ, ಸಿಂಹ, ಕಾಡಾನೆಗಳಲ್ಲಿ ವೈವಿಧ್ಯತೆ ಕಂಡು ಬರುವುದಿಲ್ಲ, ಆದರೆ ಪಕ್ಷಿಗಳು, ಚಿಟ್ಟೆಗಳಂತ ಪ್ರಾಣಿಗಳಲ್ಲಿ ನೂರಾರು ವೈವಿಧ್ಯತೆಗಳು ಕಾಣುವುದರಿಂದಾಗಿ ಪಕ್ಷಿ ಛಾಯಾಚಿತ್ರಗಳಿಗೆ ಆದ್ಯತೆ ನೀಡಲಾಗಿದೆ. ಓರ್ವ ಛಾಯಾಗ್ರಾಹಕಿಯಾಗಿ ಸಾಕಷ್ಟು ಸವಾಲುಗಳನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಎದುರಿಸಿದ್ದಾಗಿ ಹೇಳಿದ ಛಾಯಾ, ಪ್ರತೀಯೋರ್ವ ಮಹಿಳೆಯರೂ ತನ್ನ ಮನಸ್ಸೊಳಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಮೂಲಕ ಸಮಾಜದಲ್ಲಿ ಪ್ರತಿಭಾವಂತೆಯಾಗಿ ಗುರುತಿಸಿಕೊಳ್ಳಬಹುದು. ಛಾಯಾಗ್ರಹಣದಂಥ ಹೆಚ್ಚು ವೆಚ್ಚ ಬಯಸುವ ಹವ್ಸಾಸ ಆರ್ಥಿಕ ಲಾಭಕ್ಕಿಂತ ಮನಸ್ಸಿಗೆ ಹೆಚ್ಚು ತೃಪ್ತಿ ನೀಡಬಲ್ಲದ್ದಾಗಿದೆ ಎಂದೂ ಅಭಿಪ್ರಾಯಪಟ್ಟರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ವಿಶ್ವದಾದ್ಯಂತ ಛಾಯಾಗ್ರಾಹಕರ ಶ್ರಮ ಗುರುತಿಸಲು ರೋಟರಿಯಿಂದ ಛಾಯಾಗ್ರಹಣ ಮಹತ್ವದ ಬಗೆಗಿನ ಕಾಯಕ್ರಮ ಆಯೋಜಿಸಿರುವುದಾಗಿ ಹೇಳಿದರು. ಕಾರ್ಯಕ್ರಮ ಸಂಚಾಲಕ ಅನಿಲ್ ಹೆಚ್.ಟಿ., ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ನಿರ್ದೇಶಕರಾದ ಎಂ. ಧನಂಜಯ್, ಗಾನಾ ಪ್ರಶಾಂತ್, ಶಂಕರ್ ಪೂಜಾರಿ ಇದ್ದರು.
300ಕ್ಕೂ ಅಧಿಕ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದರ್ಶನವೀಕ್ಷಕರ ಮನಸೆಳೆಯಿತು.