ಹೊಂಡ ತಪ್ಪಿಸಲು ಹೋದರೆ ಬೀಳುವುದು ಗುಂಡಿಗೆ

kls road
ಕಳಸ-ಹೊರನಾಡು ಹದೆಗೆಟ್ಟ ರಸ್ತೆ.
Published on

ಳಸ: ತಾಲೂಕಿನಲ್ಲಿರುವ ರಾಜ್ಯ ಹೆದ್ದಾರಿಗಳು ಸಂಪೂರ್ಣವಾಗಿ ಹದೆಗೆಟ್ಟಿರುವುದರಿಂದ ಪ್ರವಾಸಿಗರೂ ತಾಲೂಕಿನಲ್ಲಿ ಸಂಚರಿಸಲು ಯೋಚಿಸುವಂತಾಗಿದೆ. ಕಳಸ, ಹೊರನಾಡಿನ ಧಾರ್ಮಿಕ ಕ್ಷೇಂದ್ರಗಳು ಬಹಳ ಪ್ರಸಿದ್ಧಿ ಪಡೆದಿವೆ. ಪ್ರವಾಸಿಗರಿಗಂತೂ ತಾಲೂಕು ನೆಚ್ಚಿನ ಪ್ರದೇಶವಾಗಿದೆ. ಕುದುರೆಮುಖದ ಗಿರಿಶ್ರೇಣಿಗಳು, ಕ್ಯಾತನಮಕ್ಕಿ, ಮೈದಾಡಿ, ಅಂಬಾತೀರ್ಥ, ಸುರುಮನೆ ಫಾಲ್ಸ್, ನೇತ್ರಾವತಿ ಗಿರಿಶಿಖರ, ಪಂಚ ತೀರ್ಥಗಳು ಪ್ರವಾಸಿಗರ ನೆಚ್ಚಿನ ತಾಣವಾಗಿವೆ. ಆದರೆ ಪ್ರಕೃತಿ ಸೌಂದರ್ಯ ತನ್ನೊಡಲಿನಲ್ಲಿ ಕಟ್ಟಿಕೊಂಡಿರುವ ತಾಲೂಕಿನ ರಸ್ತೆಗಳಲ್ಲಿ ಸಂಚರಿಸಿದರೆ ಅತ್ಯಂತ ಕೆಟ್ಟ ಅನುಭವವಾಗುತ್ತದೆ.

ಕಳಸ ತಾಲೂಕಿಗೆ ಬಾಳೆಹೊನ್ನೂರು, ಕೊಟ್ಟಿಗೆಹಾರ, ಮಂಗಳೂರು ರಾಜ್ಯ ಹೆದ್ದಾರಿಗಳ ಮುಖಾಂತರವೇ ಬರಬೇಕು. ಆದರೆ ಯಾವ ಹೆದ್ದಾರಿಯಲ್ಲೂ ಸುಗಮವಾಗಿ ವಾಹನ ಸಂಚರಿಸದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮತ್ತು ಕರಾವಳಿ ಬೆಸೆಯುವ ಎಸ್.ಕೆ.ಬಾರ್ಡರ್-ಕುದುರೆಮುಖ-ಕಳಸ-ಮಾಗುಂಡಿ-ಬಾಳೂರು-ಕೊಟ್ಟಿಗೆಹಾರ ಸಂಪರ್ಕಿಸುವ 91 ಕಿ.ಮೀ ದೂರದ ಹೆದ್ದಾರಿ ಉದ್ದಕ್ಕೂ ಗುಂಡಿಗಳೇ ಇವೆ. ವಾಹನ ಸವಾರರು ಸಣ್ಣ ಗುಂಡಿಯನ್ನು ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬೀಳುತ್ತಾರೆ.
ಬೇರೆ ತಾಲೂಕಿನಿಂದ ಬಂದಾಗ ಸಿಗುವ ಗುಂಡಿಗಳನ್ನು ನೋಡಿದಾಗಲೇ ಕಳಸ ತಾಲೂಕು ಪ್ರವೇಶ ಮಾಡಿದೆವು ಎಂದು ತಿಳಿಯಬಹುದು. ಚರಂಡಿ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆ ಮೇಲೆಯೇ ಹರಿಯುವ ನೀರಿನಿಂದ, ದಶಕಗಳಿಂದ ರಸ್ತೆಯ ದುರಸ್ತಿ ಮಾಡದೆ ಇರುವುದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ. ಇನ್ನು ಈ ಬಾರಿ ಅತಿಯಾದ ಮಳೆಯಿಂದ ಕಾಂಕ್ರೀಟ್ ರಸ್ತೆ ತಡೆಗೋಡೆಗಳು ಕೂಡ ನೆಲಸಮವಾಗಿವೆ. ರಸ್ತೆಯ ಇಂಥ ಪರಿಸ್ಥಿತಿಯಿಂದ ಪ್ರವಾಸಿಗರೂ ಹಿಡಿ ಶಾಪ ಹಾಕುತ್ತಿದ್ದಾರೆ. ಇಂಥ ರಸ್ತೆಯನ್ನು ಎಲ್ಲೂ ನೋಡಿಲ್ಲ. ಈ ರಸ್ತೆಯಲ್ಲಿ ಒಂದು ದಿನ ಪ್ರಯಾಣ ಮಾಡಿದರೆ ಎರಡು ದಿನ ವಿಶ್ರಾಂತಿ ಬೇಕಾಗುತ್ತದೆ ಎನ್ನುತ್ತಾರೆ ಪ್ರವಾಸಿಗರು.
ಕಳಸ ತಾಲೂಕಿನ ಗ್ರಾಮಸ್ಥರು ಶಿಕ್ಷಣ, ತುರ್ತು ಚಿಕಿತ್ಸೆ ಇತರ ಸೌಲಭ್ಯಕ್ಕೆ ಕರಾವಳಿಯನ್ನೇ ಆಶ್ರಯಿಸಿದ್ದಾರೆ. ಆದರೆ ಹದೆಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆ ಆದಾಗ ರೋಗಿಗಳನ್ನು ಮಂಗಳೂರು, ಮಣಿಪಾಲ, ಕಾರ್ಕಳ, ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಬೇಕಾದರೆ ಆಂಬುಲೆನ್ಸ್ ಚಾಲಕರು ಸಂಕಷ್ಟ ಪಡುವಂತಾಗಿದೆ.
ರಾಜ್ಯ ಹೆದ್ದಾರಿಗಳ ದುರವಸ್ಥೆ ಒಂದೆಡೆಯಾದರೆ, ಗ್ರಾಮೀಣ ಪ್ರದೇಶಗಳ ರಸ್ತೆಗಳ ಪರಿಸ್ಥಿತಿ ಹೇಳತೀರದಂತಾಗಿದೆ. ಗುಂಡಿಗಳಲ್ಲಿ ರಸ್ತೆಯನ್ನು ನೋಡುವಂತಾಗಿದೆ. ಗ್ರಾಮೀಣ ಪ್ರದೇಶದ ಯಾವುದೇ ರಸ್ತೆಗಳಲ್ಲಿ ವಾಹನಗಳು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಯ ರಸ್ತೆಗಳ ಪರಿಸ್ಥಿತಿಯನ್ನು ಪಕ್ಕದ ತಾಲೂಕುಗಳಾದ ಕೊಪ್ಪ, ಶೃಂಗೇರಿ, ಕಾರ್ಕಳ ರಸ್ತೆಗಳಿಗೆ ಹೋಲಿಕೆ ಮಾಡಿ ಗ್ರಾಮಸ್ಥರು ಹಿಯಾಳಿಸುತ್ತಿದ್ದಾರೆ. ಪಕ್ಕದ ಎಲ್ಲ ತಾಲೂಕುಗಳಲ್ಲೂ ರಸ್ತೆ ಅಭಿವೃದ್ಧಿ ಕೆಲಸ ಆಗುತ್ತಿದೆ. ಆದರೆ ತಾಲೂಕಿನ ರಸ್ತೆಗಳನ್ನು ಯಾಕೆ ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಉತ್ತರ, ಪರಿಹಾರವೂ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net