

ಹುಬ್ಬಳ್ಳಿ : ಮುಡಾ ಹಗರಣದಿಂದ ನುಣುಚಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ 15ಕ್ಕೂ ಹೆಚ್ಚು ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ದಾಖಲೆಗಳೇನಾದರೂ ಸಿಕ್ಕಲ್ಲಿ ಬಿಡುಗಡೆಗೊಳಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದರು.
ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಅವರು ನಡೆಸಿರುವ ಹಗರಣಗಳು ದೆಹಲಿ ಮಟ್ಟದಲ್ಲಿ ಚರ್ಚೆಗೀಡಾಗುತ್ತಿವೆ. ಇದೇ ಕಾರಣಕ್ಕೆ ಕಾಂಗ್ರೆಸ್ ಶಾಸಕರ ಸಭೆ ನಡೆಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರನ್ನು ಬದಲಾಯಿಸಿ, ಮುಖ್ಯಮಂತ್ರಿ ಸ್ಥಾನದಲ್ಲಿ ಹೊಸಬರನ್ನು ಕೂರಿಸುವ ಯೋಚನೆಯಲ್ಲಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ದೆಹಲಿಗೆ ದೌಡಾಯಿಸಿದ್ದಾರೆ ಎಂದರು.
ಈ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಎಸ್ಐಟಿಯಿಂದ ಸಮರ್ಪಕ ತನಿಖೆ ಸಾಧ್ಯವಿಲ್ಲ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ, ಮೂಡಾ ಹಗರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿದೆ. ಹಗರಣಗಳಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇರುವುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಹೇಳಿದರು.
ಬಿಜೆಪಿಯವರು ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಜೀವನ ಮತ್ತು ಜೆಡಿಎಸ್ ಅನ್ನು ಮುಗಿಸುತ್ತಾರೆ ಎಂಬ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಯಾರು, ಯಾರನ್ನು ಮುಗಿಸುತ್ತಾರೆ ಎಂಬುದು ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳಾದರೂ ಉತ್ತರ ಕರ್ನಾಟಕದತ್ತ ಮುಖ ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಭಾಗಕ್ಕೆ ಹಲವಾರು ನೀರಾವರಿ ಯೋಜನೆ ತಂದಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಆ ಯೋಜನೆಗಳಿಗೂ ಕಲ್ಲು ಹಾಕುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಇತರ ಮುಖಂಡರ ಭ್ರಷ್ಟಾಚಾರದ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನ್ನ ಮೇಲೆ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಹೇಳಿದರು.