

ಚಿತ್ರದುರ್ಗ: ತಾಯಿಯನ್ನು ಮರೆತರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಹೇಳಿದರು.
ಮಾದಾರ ಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ತಾಯಿ ಗಂಗಮ್ಮ ಅವರ ಕೈಲಾಸ ಶಿವಗಣಾರಾಧನೆ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲೂಕು ಹಿರೇಕಂದವಾಡಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಷ್ಟೇ ಎತ್ತರಕ್ಕೆ ಏರಿದರೂ ಹೆತ್ತವರನ್ನು ಮರೆಯಬಾರದು. ಮರೆತರೆ ಅಂಥವರಿಗೆ ನರಕ ಕಾದಿರುತ್ತದೆ ಎಂದು ಎಚ್ಚರಿಸಿದ ಶ್ರೀಗಳು, ಸ್ನೇಹಿತರು, ಬಂಧುಬಳಗ ಅಥವಾ ಮತದಾರರು ಯಾರೆ ಇರಲಿ, ಉತ್ತಮ ಸ್ಥಾನಕ್ಕೇರಲು ನೆರವಾದವರನ್ನು ಎಂದಿಗೂ ಕಡೆಗಣಿಸಬಾರದು ಎಂದರು.
ಪೂರ್ವಾಶ್ರಮದವರ ಕಷ್ಟ-ಸುಖಗಳಿಗೆ ಭಕ್ತರು ನೆರವಾಗಬೇಕು. ಹಣ, ವಿದ್ಯೆ, ಪೀಠ ಇವುಗಳು ಯಾವು ಮನುಷ್ಯನನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ, ಹೃದಯ ಶ್ರೀಮಂತಿಕೆ ಮುಖ್ಯವೆಂದ ಶ್ರೀಗಳು, ಮಾದಾರ ಶ್ರೀಗಳ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕ ಮಠದ ಶ್ರೀ ನಿರಂಜನಾನಂದಾಪುರಿ ಸ್ವಾಮೀಜಿ ಮಾತನಾಡಿ, ಕೆಟ್ಟ ಮಗ ಇರಬಹುದು. ಆದರೆ, ತಾಯಿ ಎಂದಿಗೂ ಕೆಟ್ಟವಳಾಗಲು ಸಾಧ್ಯವಿಲ್ಲ. ಮಾತೃ, ಪಿತೃ ಹಾಗೂ ಸಮಾಜದ ಋಣ ತೀರಿಸುವ ಹೊಣೆ ನಮ್ಮ ಮೇಲೆ ಇರುತ್ತದೆ ಎಂದರು.
ಮುರುಘಾಮಠ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುವ, ಪಾಲಕರು ಸತ್ತರೂ ಅವರ ಅಂತಿಮ ಸಂಸ್ಕಾರಕ್ಕೆ ಬಾರದೆ ಇರುವ ಮಕ್ಕಳಿದ್ದಾರೆಂಬುದೇ ನೋವಿನ ವಿಷಯ. ಆದ್ದರಿಂದ ಮಕ್ಕಳಿಗೆ ಪಾಲಕರು, ಶಿಕ್ಷಕರು ಮೌಲ್ಯಗಳನ್ನು ಹೇಳಿಕೊಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಷ್ಟ್ರೀಯ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಮಂದಕೃಷ್ಣ ಮಾದಿಗ, ಬಿಎಸ್‌ಪಿ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ್, ರಮೇಶ ಜಿಗಜಿಣಗಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು.
ಶ್ರೀ ಬಸವಕುಮಾರ ಸ್ವಾಮೀಜಿ , ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ, ಶಿವಬಸವ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವನಾಗೀದೇವ ಶ್ರೀ, ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಬಸವ ಕೇತೇಶ್ವರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ ಇದ್ದರು.