

ಹೊಸದುರ್ಗ: ಸಮುದಾಯ ಮೊದಲು ಸಂಘಟನೆ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಅಂಜನೇಯ ಹೇಳಿದರು.
ತಾಲೂಕು ಮಾದಿಗ ಸಮಾಜ ಪಟ್ಟಣದ ಆಶೋಕ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಸಚಿವರು, ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶೈಕ್ಷಣಿಕ ಪ್ರಗತಿಯಿಂದ ಮಾತ್ರ ರಾಜಕೀಯ, ಸಾಮಾಜಿಕ ಸ್ಥಾನಮಾನ ಪಡೆಯಲು ಸಾಧ್ಯ ಎಂಬ ಅರಿವು ಇರಬೇಕು. ಬಡತನ ನೆಪ ಬಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮೊದಲ ಆದ್ಯತೆ ಆಗಬೇಕು. ವಿದ್ಯಾಭ್ಯಾಸ ಕುರಿತು ನಿರ್ಲಕ್ಷೃ ವಹಿಸಿದರೆ ಸಮಾಜ ದಿಕ್ಕು ತಪ್ಪಲಿದೆ ಎಂದು ಎಚ್ಚರಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ನಿರಂತರ ಓದು, ಕಠಿಣ ಅಭ್ಯಾಸ, ಅಧ್ಯಯನದಿಂದ ಒಂದು ಸಮುದಾಯವಷ್ಟೇ ಅಲ್ಲ ಎಲ್ಲ ವರ್ಗ, ದೇಶದ ಅಭಿವೃದ್ಧಿ ಕೊಡುಗೆ ನೀಡಬಹುದು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ನಮ್ಮ ಕಣ್ಣ ಮುಂದೆ ಇದೆ. ಆದ್ದರಿಂದ ನಾವೆಲ್ಲರೂ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಬೇಕು ಎಂದು ಹೇಳಿದರು.