

ಅರಕಲಗೂಡು: ಹೊಸತನದ ಅನ್ವೇಷಣೆಯಲ್ಲಿ ತೊಡಗಿಕೊಳ್ಳುವ ಮನುಷ್ಯ ತನ್ನನ್ನು ತಾನು ಕಂಡುಕೊಳ್ಳದಿರುವುದೇ ದುರಂತ, ಮೊದಲು ನಮ್ಮನ್ನು ನಾವು ಅರಿತು ಸನ್ಮಾರ್ಗದಲ್ಲಿ ಸಾಗಿದರೆ ಮೋಕ್ಷಕ್ಕೆ ದಾರಿಯಾಗಲಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಹಾಗೆಯೇ ವೃಕ್ಷಗಳನ್ನು ನಾವು ರಕ್ಷಿಸಿದರೆ ವೃಕ್ಷವೂ ಸಹ ನಮನ್ನು ರಕ್ಷಿಸುತ್ತದೆ. ಹೀಗಾಗಿ ಮರಗಳನ್ನು ಹೆಚ್ಚು ಬೆಳೆಸಿ. ಧರ್ಮವನ್ನು ರಕ್ಷಣೆ ಮಾಡಿದರೆ ನಾವು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುತ್ತೇವೆ, ವೃಕ್ಷವನ್ನು ರಕ್ಷಣೆ ಮಾಡಿದರೆ ನಮಗೆ ಪ್ರಾಣವಾಯು ಸಿಗುವ ಮೂಲಕ ನಮ್ಮ ದೇಹ ಉಳಿಯುತ್ತದೆ. ಇಂತಹ ಧರ್ಮ ಹಾಗೂ ವೃಕ್ಷ ರಕ್ಷಣೆಗೆ ಎಲ್ಲರೂ ಪಣತೊಡಬೇಕು ಎಂದರು.
ನಿಸ್ವಾರ್ಥವಾಗಿ ಜನಗಳ ಸೇವೆ ಮಾಡಿ, ಪರಮಾತ್ಮನನ್ನು ಪೂಜಿಸುವ ಮೂಲಕ ಉತ್ತಮ ಮನುಜರಾಗಿ ಬಾಳಿ, ಜಗತ್ತಿನಲ್ಲಿರುವ ವಸ್ತುಗಳ ಮೇಲಿನ ಇತಿಮಿತಿ ನಮಗೆ ಅರಿವಾದರೆ ಎಲ್ಲಾ ವಸ್ತುಗಳ ಮಧ್ಯದಲ್ಲಿದ್ದರೂ ಕೂಡ ಜಗತ್ತನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದು ಗೊತ್ತಾಗುತ್ತದೆ. ಪರಮಾತ್ಮನ ಆವಿರ್ಭಾವವೇ ಆಗಿರುವ ಜಗತ್ತಿನಲ್ಲಿ ಹಿರಿಯರು ಹಾಕಿಕೊಟ್ಟ ಪಥದಲ್ಲಿ ನಡೆದರೆ ಮನಸ್ಸು ಶುದ್ಧಿಯಾಗುವುದರ ಜತೆಗೆ ಬದುಕು ಹಸನಾಗುತ್ತದೆ ಎಂದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಶ್ರೀ ಕ್ಷೇತ್ರ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ರೈತರ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ನೈತಿಕತೆಯನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ, ಮಠದ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಇದ್ದರು.
ಮುತ್ತಿನ ಪಲ್ಲಕ್ಕಿ ಮೆರವಣಿಗೆ: ಇದಕ್ಕೂ ಮುನ್ನ ಪುರಾಣೇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವಾದ ಚಿಕ್ಕಬೊಮ್ಮನಹಳ್ಳಿ ಗ್ರಾಮಕ್ಕೆ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಆಗಮಿಸಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಗ್ರಾಮದ ಮುಖ್ಯದ್ವಾರದಿಂದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಮುತ್ತಿನ ಪಲ್ಲಕ್ಕಿಯಲ್ಲಿ ಸಹಸ್ರಾರು ಭಕ್ತರೊಂದಿಗೆ ಕರೆತರಲಾಯಿತು. ಮುತ್ತಿನಪಲ್ಲಕ್ಕಿಯಲ್ಲಿ ಆಗಮಿಸಿದ ಶ್ರೀಗಳು ದೇವಾಲಯಕ್ಕೆ ತೆರಳಿ ರಂಗನಾಥಸ್ವಾಮಿಗೆ ಮಂಗಳಾರತಿ ನೆರವೇರಿಸಿದರು. ಇದೇ ಸಂದರ್ಭ ಶ್ರೀ ಮಠಕ್ಕೆ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.