

ಹುಬ್ಬಳ್ಳಿ: ನೂರು ಕೈಗಳಿಂದ ಗಳಿಸಿದ್ದನ್ನು ಸಾವಿರ ಕೈಗಳಿಂದ ದಾನ ಮಾಡಬೇಕು. ಅಂದಾಗ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಕಿಮ್ಸ್‌ನಲ್ಲಿ ದಿ. ಚಿಗುರುಪಾಟಿ ಮಲ್ಲಿಕಾರ್ಜುನ ಅವರ ಸ್ಮರಣಾರ್ಥ 1.5 ಕೋಟಿ ರೂ. ವೆಚ್ಚದ ಸ್ವರ್ಣ ಶಿಶುಧಾಮ ಹಾಗೂ ಎಂಆರ್‌ಐ ಸ್ಕಾೃನ್ ಸೆಂಟರ್ ಉದ್ಘಾಟಿಸಿದ ನಂತರ ಸೋಮವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ವಿ.ಎಸ್.ವಿ. ಪ್ರಸಾದ ಅವರು ಸಮಾಜಮುಖಿ ಕೆಲಸ ಮಾಡಿದ್ದಾರೆ. ಮಕ್ಕಳ ಸೇವೆ ಮಾಡಿದರೆ ದೇವರು ಆಶೀರ್ವದಿಸುತ್ತಾನೆ. ಯಾಕೆಂದರೆ ಸಮಾಜ ಕೊಟ್ಟಿದ್ದನ್ನು ಸಮಾಜಕ್ಕೆ ಬಳಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಸಾದ ಅವರ ಸಾಮಾಜಿಕ ಕಾರ್ಯವನ್ನು ಬಣ್ಣಿಸಿದರು. ಅಲ್ಲದೇ ಹಿಂದಿನ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಕಿಮ್ಸ್ ಅಭಿವೃದ್ಧಿ ಬಗೆಗಿನ ಕಳಕಳಿಯನ್ನೂ ಕೊಂಡಾಡಿದರು.
ಕಿಮ್ಸ್‌ಗೆ ಅಗತ್ಯ ಅನುದಾನವನ್ನು ಕೇಂದ್ರ ಹಾಗೂ ನಮ್ಮ ರಾಜ್ಯ ಸರ್ಕಾರವಿದ್ದಾಗ ಬಹಳಷ್ಟು ಅನುದಾನ ನೀಡಿದ್ದೇವೆ. ನಾನು ಮತ್ತೊಮ್ಮೆ ಆಯ್ಕೆಯಾದ ಬಳಿಕ ಕಿಮ್ಸ್‌ಗೆ ಇನ್ನೊಂದು ಎಂಆರ್‌ಐ ಯಂತ್ರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಂಸಿ ಅಂದರೆ ಮೊದಲು ಭಯವಿತ್ತು. ಕೋವಿಡ್ ನಂತರ ಚಿತ್ರಣ ಬದಲಾಗಿದೆ. ಪ್ರಲ್ಹಾದ ಜೋಶಿ ಅವರು ಕೇಂದ್ರದಿಂದ 150 ಕೋಟಿ ರೂ. ಅನುದಾನ ತಂದು ಹೊಸ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಬಹಳಷ್ಟು ಅನುದಾನ ಕೊಡಿಸಿದ್ದಾರೆ. ಆದರೆ, ರಾಜ್ಯ ಸರ್ಕಾರದಿಂದ ಅನುದಾನ ಕಡಿಮೆ ಬರುತ್ತಿದೆ. ಈ ಕುರಿತು ಅಧಿವೇಶನದಲ್ಲಿ ದನಿಯಾಗಿದ್ದೇನೆ ಎಂದರು.
ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ, ದಾನಿ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ನನ್ನ ತಂದೆಯ ಸ್ಮರಣಾರ್ಥ ನವಜಾತ ಶಿಶುಗಳ ಆರೈಕೆಗಾಗಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸ್ವರ್ಣ ಶಿಶುಧಾಮ ನಿರ್ಮಿಸಲಾಗಿದೆ. ಯಾವ ಸರ್ಕಾರಿ ಆಸ್ಪತ್ರೆಯಲ್ಲಿಯೂ ಇಂಥ ಸವಲತ್ತು ಇಲ್ಲ. ಕಿಮ್ಸ್‌ನಲ್ಲಿ ಇಂಥ ಸೌಲಭ್ಯ ಕಲ್ಪಿಸಲು ಅವಕಾಶ ಕೊಟ್ಟಿದ್ದಕ್ಕೆ ನನ್ನ ಸಂತೋಷವಾಗಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಯರ್ ವೀಣಾ ಬರದ್ವಾಡ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಕಿಮ್ಸ್ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಸಿದ್ದೇಶ್ವರ ಕಟಕೋಳ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಮೀನಾಕ್ಷಿ ವಂಟಮೂರಿ, ಡಿಎಚ್‌ಒ ಡಾ. ಶಶಿ ಪಾಟೀಲ, ಇತರರು ಇದ್ದರು.