ಅನಾಚಾರ ಮಾಡಿದರೆ ದೇವರಿಂದಲೇ ಸರ್ಜಿಕಲ್ ಸ್ಟ್ರೈಕ್

satyatma theertharu
ಸೂರ್ಯಷಷ್ಠಿಯ ನಿಮಿತ್ತ ಗುರುವಾರ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಹೊಳೆಹೊನ್ನೂರಿನ ಭದ್ರಾ ನದಿಯಲ್ಲಿ ತೀರ್ಥಸ್ನಾನ ಮಾಡಿದರು.
Published on

ಶಿವಮೊಗ್ಗ: ಅನ್ಯಾಯ, ಅನಾಚಾರ ಮಾಡಿದರೆ ದೇವರು ಒಂದಲ್ಲಾ ಒಂದು ದಿನ ಸರ್ಜಿಕಲ್ ಸ್ಟ್ರೈಕ್ ಮಾಡಿಯೇ ಮಾಡುತ್ತಾನೆ. ಈ ಬಗ್ಗೆ ಸದಾ ಎಚ್ಚರವಿರಲಿ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಎಚ್ಚರಿಸಿದರು.

ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿ, ಭ್ರಷ್ಟಾಚಾರ, ಕಳ್ಳತನ ಮಾಡಿದರೆ ಅನಂತ ದುಃಖವನ್ನು ಅನುಭವಿಸುತ್ತಾರೆ. ಆದರೂ ಅವರಿಗೆ ಅನ್ಯಾಯದ ಅರ್ಥ ಆಗುವುದಿಲ್ಲ. ಅನ್ಯಾಯದ ಹಣವನ್ನು ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲ. ದೇವರು ಮಾಡಿದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯ ನಡೆದರೆ ದೇವರು ಸುಮ್ಮನೆ ಕೂರುವುದಿಲ್ಲ ಎಂದರು.
ದೇವರಿಗೆ ಹೇಡಿತನವಿಲ್ಲ. ಹೀಗಾಗಿ ನಿಶ್ಚಿತವಾಗಿ ಅನಾಚಾರಿಗಳಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಮೊದಲು ಅಧರ್ಮ ವೃದ್ಧಿಯಾಗಲು ಬಿಡುತ್ತಾನೆ. ವ್ಯಕ್ತಿ ತಿದ್ದಿಕೊಳ್ಳುತ್ತಾನೆಯೇ ಎಂಬುದನ್ನು ಕಾದು ನೋಡುತ್ತಾನೆ. ಬದಲಾಗದಿದ್ದರೆ ಕೊನೆಗೆ ಒಂದು ದಿನ ತಕ್ಕಶಾಸ್ತಿ ಮಾಡುತ್ತಾನೆ. ದೇವರ ನಿಗ್ರಹಕ್ಕೆ ಗುರಿಯಾಗುವ ಯಾವ ಅಧರ್ಮವನ್ನೂ ಮಾಡಬಾರದು ಎಂದು ತಿಳಿಸಿದರು.
ಎಲ್ಲ ಸಜ್ಜನರೂ, ಅದರಲ್ಲೂ ಸೀಯರು, ವಿಶೇಷವಾಗಿ ಯುವತಿಯರು ಉತ್ತಮವಾದ ಬ್ರಹ್ಮಚರ್ಯದಿಂದ ಜೀವನ ನಡೆಸಬೇಕು. ಅದರಲ್ಲೂ ತಮ್ಮ ವಿವಾಹಪೂರ್ವದಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಬೇಕು. ಶುದ್ಧವಾದ ಚಾರಿತ್ರೃ ಸಂಪನ್ನರಾಗಿ ಬಾಳಬೇಕು. ಅದಕ್ಕಾಗಿ ದುರ್ಗೆಯ ಸ್ಮರಣೆ ಮಾಡಬೇಕು. ದುರ್ಗಾ ಸುಳಾದಿಯನ್ನು ನಿತ್ಯ ಹೇಳಬೇಕು ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net