ಲಂಚಕ್ಕೆ ಬೇಡಿಕೆ ಇಟ್ಟರೆ ಎತ್ತಂಗಡಿ

6Kgfph-1.
Published on

ಕೆಜಿಎಫ್​- ರೈತರ ಜಮೀನುಗಳ ಪೋಡಿ ದುರಸ್ತಿ ವಿಚಾರದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ತಾಲೂಕಿನ ಕೆಂಪಾಪುರ ಮತ್ತು ಇನ್ನಿತರ ಮೂರ್ನಾಲ್ಕು ಜಾಗಗಳಲ್ಲಿ ಒಂದು ಎಕರೆಗೆ ಇಷ್ಟು, ಐದು ಎಕರೆಗೆ ಇಷ್ಟು ಎಂದು ಬೆಲೆ ನಿಗದಿ ಮಾಡಿಕೊಂಡು ಮಧ್ಯವರ್ತಿಗಳ ಮೂಲಕ ವಸೂಲಿ ಮಾಡುತ್ತಿರುವುದರ ಬಗ್ಗೆ ವ್ಯಾಪಕ ದೂರು ಕೇಳಿಬಂದಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕಿ ರೂಪಕಲಾ ಕಂದಾಯ ಇಲಾಖೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು.

ತಾಲೂಕು ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಭಾಗದ ಸರ್ಕಾರಿ ಗೋಮಾಳ, ಖರಾಬು ಜಮೀನುಗಳನ್ನು ಉದ್ದೇಶ ಪೂರ್ವಕವಾಗಿಯಾಗಲೀ, ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೇರೆ ರಾಜ್ಯದವರ ಹೆಸರಿಗೆ ಖಾತೆ ಮಾಡುತ್ತಿರುವ ವಿಚಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಇದ್ದಲ್ಲಿ ಅದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.

ರಾಜ್ಯದ ಒಂದು ಇಂಚು ಜಾಗವನ್ನು ಆಂಧ್ರ ಪ್ರದೇಶದ ವ್ಯಕ್ತಿಗಳಿಗೆ ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರುಗಳ ಹೆಸರಿಗೆ ಖಾತೆ ಮಾಡಿರುವುದು ಕಂಡುಬಂದಲ್ಲಿ ತಕ್ಷಣವೇ ಅಲ್ಲಿಯೇ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

10 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ ಈ ಬೃಹತ್​ ಕಟ್ಟಡವನ್ನು ನಿಮಾರ್ಣ ಮಾಡುವ ಸಮಯದಲ್ಲಿ ಪ್ರತಿಯೊಂದು ಇಲಾಖೆಯ ಪ್ರತಿ ಟೇಬಲ್​ ಬಳಿ ನಾನು ಓಡಾಡಿದ್ದೇನೆ. ಆ ಸಮಯದಲ್ಲಿ ತಹಸೀಲ್ದಾರ್​, ಶಿರಸ್ತೇದಾರ್​, ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಿಗರು ಯಾರೂ ಸಹ ನಿಮಾರ್ಣ ಹಂತದಲ್ಲಿದ್ದಾಗ ಕಟ್ಟಡದ ಕಾವಲು ಕಾಯಲಿಲ್ಲ. ನಾನು ಇಲ್ಲವೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಕಾವಲು ಕಾದು ಕೆಲಸ ಮೇಲ್ವಿಚಾರಣೆ ಮಾಡಿದ್ದೇವೆ. ಇಷ್ಟೆಲ್ಲಾ ಕಷ್ಟಪಟ್ಟು ಕಟ್ಟಡ ನಿಮಾರ್ಣ ಮಾಡಿಕೊಟ್ಟಿದ್ದರೆ, ಆ ಕಟ್ಟಡದಲ್ಲಿ ಕುಳಿತುಕೊಂಡು ರೈತರು, ಬಡವರು ನಿಮ್ಮ ಬಳಿ ಬಂದಾಗ ಅವರಿಗೆ ಹಣ ನೀಡುವಂತೆ ಪೀಡಿಸಿ, ಅವರು ಅಯ್ಯೋ ಎಂದು ನೊಂದುಕೊಂಡು ಹೋಗುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ರೂಪಾಕಲಾ ಪ್ರಶ್ನಿಸಿದರು.

ಪ್ರತಿಯೊಂದು ಹಂತದಲ್ಲೂ ದುಡ್ಡು ಕೊಟ್ಟರೆ ಮಾತ್ರ ಕಡತ ಮುಂದಕ್ಕೆ ಹೋಗುತ್ತದೆ ಎಂದು ಹೇಳಿ ಕೆಳಗಿನಿಂದ ತಹಸೀಲ್ದಾರ್​ವರೆಗೂ ದುಡ್ಡು ಸುರಿಯಬೇಕು ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ರೀತಿಯಾಗಿ ಪ್ರಚಾರವಾಗಿದ್ದು, ಇದನ್ನು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಟ್ಟ ಹಾಕಿ. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವವಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದು, ಅದನ್ನು ಹೇಗೆ ಹತೋಟಿಗೆ ತರುತ್ತೀರಾ?, ಅವರಿಗೆ ಯಾವಾಗ ಸಭೆ ಕರೆಯುತ್ತೀರಾ? ಇಲ್ಲಿನ ವ್ಯವಸ್ಥೆ ಜಡ್ಡುಗಟ್ಟಿದ್ದು ಅದನ್ನು ತಿಳಿಗೊಳಿಸುವ ಕೆಲಸ ಕೂಡಲೇ ಮಾಡಬೇಕು ಎಂದು ತಹಸೀಲ್ದಾರ್​ಗೆ ಸೂಚಿಸಿದರು.

ಪೌರಾಯುಕ್ತ ಆಂಜನೇಯಲು, ಶಿರಸ್ತೇದಾರ್​ ಮಂಜುನಾಥ್​, ಲತಾ, ರಾಜಸ್ವ ನಿರೀಕ್ಷಕರಾದ ಮುನಿವೆಂಕಟಸ್ವಾಮಿ, ಮಂಜುನಾಥ್​, ಚಂದ್ರಮೋಹನ್​ ಇದ್ದರು.

ಓವರ್​ ಸ್ಮಾರ್ಟ್​ ಆಗಿ ಆಡದಿರಿ

ಪಶುಪಾಲನಾ ಇಲಾಖೆ ಅಧಿಕಾರಿಯೊಬ್ಬರು ನನಗೇನೂ ತಿಳಿಯದು ಎಂದು ತುಂಬಾ ಓವರ್​ ಸ್ಮಾರ್ಟ್​ ಆಗಿ ಆಟ ಆಡಿದ್ದಕ್ಕೆ ಇಂದಿಗೆ 9 ವರ್ಷಗಳಾಯಿತು, ಇದುವರೆಗೆ ಜಿಲ್ಲೆಯ ಯಾವ ಮೂಲೆಯಲ್ಲಿಯೂ ಕಾಲಿಡಲು ಸಾಧ್ಯವಾಗಿಲ್ಲ. ಹಾಗೆಯೇ ನಿಮ್ಮಲ್ಲಿಯೂ ಕೆಲವರು ಓವರ್​ ಸ್ಮಾರ್ಟ್​ ಆಗಿ ನಡೆದುಕೊಂಡಲ್ಲಿ ನಿಮ್ಮನ್ನು ಸಹ ಜಿಲ್ಲೆಯಲ್ಲಿ ಎಲ್ಲಿಯೂ ಕಾಲಿಡಲು ಸಾಧ್ಯವಾಗದ ಜಾಗಕ್ಕೆ ಕಳುಹಿಸುವುದು ಚೆನ್ನಾಗಿ ಗೊತ್ತಿದೆ ಎಂದು ಶಾಸಕಿ ಎಚ್ಚರಿಸಿದರು.

ಬಡವರನ್ನು ಕಷ್ಟಕ್ಕೊಳಪಡಿಸಿದರೆ ಕ್ರಮ

ಕೆಲಸ ಮಾಡುವುದರಲ್ಲಿ ಹೇಗೆ ನಾನು ಗಟ್ಟಿ ಇದ್ದಿನೋ, ತಪು$್ಪ ಕೆಲಸ ಮಾಡುವವರನ್ನು ಮಟ್ಟ ಹಾಕುವುದರಲ್ಲೂ ನಾನು ಅಷ್ಟೇ ಗಟ್ಟಿಯಾಗಿದ್ದೇನೆ. ನನಗೇನಾದರೂ ಶಿಕ್ಷೆ ಕೊಟ್ಟರೆ ಅದನ್ನು ನಾನು ಸಹಿಸಿಕೊಳ್ಳಬಲ್ಲೆ, ಆದರೆ ಬಡವರನ್ನು, ರೈತರನ್ನು ಕಷ್ಟಕ್ಕೊಳಪಡಿಸಿ, ಅವರಿಂದ ಕಿತ್ತು ತಿಂದಲ್ಲಿ ಸಹಿಸಲು ಸಾಧ್ಯವಿಲ್ಲ. ಹಾಗೆ ಮಾಡಿದವರು ಮತ್ತೆ ಈ ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಬಾರದು ಹಾಗೇ ಮಾಡುತ್ತೇನೆ ಎಂದು ಶಾಸಕಿ ಗರಂ ಆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net