ಕರೆ ಮಾಡಿದರೆ ಮನೆ ಬಾಗಿಲಿಗೆ ಪಿಂಚಣಿ ಸೇವೆ : ಕಂದಾಯ ಸಚಿವ ಆರ್. ಅಶೋಕ್

Ashok 2
ಏನಜ್ಜಿ ಆರಾಮಾ...?: ಆಡಕಿಯಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಮಾಸಾಶನ ಪತ್ರ ವಿತರಣೆ ವೇಳೆ ಅಜ್ಜಿಯೊಬ್ಬರು ಸಚಿವ ಅಶೋಕ್ ಜತೆ ಸಂತಸದಿಂದ ಮಾತನಾಡಿದರು.
Published on

ಮೈಸೂರು: ಬಡ ವರ್ಗದವರು ಪಿಂಚಣಿಗೋಸ್ಕರ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ಈ ಹಿಂದೆ ಇತ್ತು. ಆದರೆ, ‘ಹಲೋ ಕಂದಾಯ ಸಚಿವರ ಸಹಾಯವಾಣಿ 155245’ಕ್ಕೆ ಕರೆ ಮಾಡಿದರೆ ಕೇವಲ 72 ಗಂಟೆಯೊಳಗೆ ನಿಮ್ಮ ಮನೆ ಬಾಗಿಲಿಗೆ ಪಿಂಚಣಿ ಸೇವೆ ದೊರೆಯಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡ ‘ಮೋದಿ ಯುಗ ಉತ್ಸವ’ ಕಾರ್ಯಕ್ರಮದಲ್ಲಿ 232 ಫಲಾನುಭವಿಗಳಿಗೆ ಪಿಂಚಣಿ ವಿತರಿಸಿ ಮಾತನಾಡಿದರು.

ಈ ಹಿಂದೆ ಪಿಂಚಣಿ ಪಡೆಯಲು ಜನರು ಮುಖ್ಯಮಂತ್ರಿ, ಶಾಸಕರ ಬರುವಿಕೆಗಾಗಿ ಕಾಯುವ ಪರಿಸ್ಥಿತಿ ಇತ್ತು. ಅಲ್ಲಿ ನೀಡುವ ಅರ್ಜಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ತಲುಪುತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಜನರು ಕಚೇರಿಗೆ ಅಲೆಯುವುದು ತಪ್ಪುತ್ತಿರಲಿಲ್ಲ. ಆದರೆ, ನಮ್ಮ ಸರ್ಕಾರ ಪಿಂಚಣಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಪಿಂಚಣಿ ಪಡೆಯಲು ಈ ಹಿಂದೆ ಆರು ತಿಂಗಳು ಸಮಯ ತೆಗೆದುಕೊಳ್ಳುತಿತ್ತು. ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆರು ತಿಂಗಳ ಬದಲು ಒಂದು ತಿಂಗಳ ಒಳಗೆ ಪಿಂಚಣಿ ನೀಡುವ ವ್ಯವಸ್ಥೆ ನೀಡಲು ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಒಂದು ದಿನದ ಒಳಗೆ ಪಿಂಚಣಿ ಕೊಡುವ ವ್ಯವಸ್ಥೆ ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ ನಂತರ ಇದೀಗ 72 ಗಂಟೆಯ ಒಳಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ಬಂದಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಈ ಹಿಂದೆ ವಿಧಾನಸಭೆಯಲ್ಲಿ ಪಿಂಚಣಿಯ ಕುರಿತು ಗಂಟೆಗಟ್ಟಲೇ ಚರ್ಚೆಗಳು ನಡೆಯುತಿತ್ತು. ಆದರೆ, ನಮ್ಮ ಸರ್ಕಾರ ಬಂದ ನಂತರ ಇಂತಹ ಚರ್ಚೆಗಳೇ ನಡೆಯುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭ ಶಾಸಕರಾದ ಎಸ್.ಎ. ರಾಮದಾಸ್, ಎಂ. ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಇರರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net