ಮಾದಕವಸ್ತು ವ್ಯಸನಿಗಳಾದರೆ ಸಮಾಜದ ನೆಮ್ಮದಿ ಹಾಳು

7
Published on

ಯುವಕರು ಮಾದಕವಸ್ತು ವ್ಯಸನಿಗಳಾದರೆ ಕುಟುಂಬವಷ್ಟೇ ಅಲ್ಲ ಸಮಾಜದ ನೆಮ್ಮದಿಯೂ ಹಾಳಾಗುತ್ತದೆ. ಆದ್ದರಿಂದ ಮಾದಕ ವ್ಯಸನಕ್ಕೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಪಿ.ಕುಮಾರಸ್ವಾಮಿ ಸಲಹೆ ನೀಡಿದರು.

ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಟ್ಟು ಜನಸಂಖ್ಯೆಯಲ್ಲಿ ಶೇ.27ರಷ್ಟು ಜನ ಒಂದಲ್ಲ ಒಂದು ವ್ಯಸನಕ್ಕೆ ಒಳಗಾಗಿದ್ದಾರೆ. ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಪರಿಸ್ಥಿತಿಯನ್ನು ಕಾಯ್ದುಕೊಂಡು ಹೋಗುವುದನ್ನು ಆರೋಗ್ಯ ಎನ್ನಲಾಗುತ್ತದೆ. ಆರಂಭದಲ್ಲಿ ಮೋಜಿಗಾಗಿ, ತಮಾಷೆಗಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗುತ್ತದೆ. ಆದರೆ ಸಮಯ ಕಳೆದಂತೆ ಅದೇ ವ್ಯಸನವಾಗುತ್ತದೆ. ಮಾದಕವಸ್ತುಗಳ ವ್ಯಸನಕ್ಕೆ ಒಮ್ಮೆ ವಶವಾದರೆ, ಈ ಎಲ್ಲ ಪರಿಸ್ಥಿತಿಗಳೂ ಹದಗೆಡುತ್ತವೆ. ಹಾಗಾಗಿ, ಅವುಗಳನ್ನು ತ್ಯಜಿಸಬೇಕು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಇಂತಹ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಸಾಮಾಜಿಕವಾಗಿ ಬದಲಾವಣೆ ತರಲು ನಮ್ಮ ಇಲಾಖೆಯಿಂದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ 1,500 ಆಶಾ ಕಾರ್ಯಕರ್ತೆಯರು, ಪಿಎಚ್‌ಸಿ, ಸಿಎಚ್‌ಸಿ ಸೇರಿದಂತೆ 650 ಸಂಸ್ಥೆಗಳು, ಎನ್‌ಜಿಒಗಳ ಸಹಾಯದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ಮದ್ಯವನ್ನು ತೊರೆಯುವಂತೆ ಅರಿವು ಮೂಡಿಸಲಾಗುತ್ತಿದೆ. ಇವುಗಳಿಂದ ಹೊರಬರಲು ನಮ್ಮಲ್ಲಿ ಚಿಕಿತ್ಸೆಯನ್ನೂ ನೀಡಲಾಗುತ್ತದೆ ಎಂದರು.

ತಹಸೀಲ್ದಾರ್ ಗಿರೀಶ್ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇರುತ್ತದೆ. ಹಾಗಾಗಿ, ಮಾದಕವಸ್ತುಗಳಿಂದ ದೂರವಿರಬೇಕು. ಒಂದು ಉತ್ತಮ ಸಮಾಜ ನಿರ್ಮಾಣವಾಗುವುದು, ಯುವ ಸಮೂಹದಿಂದ. ಹಾಗಾಗಿ ಯುವ ಸಮೂಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಮಾದಕ ವಸ್ತುಗಳನ್ನು ತ್ಯಜಿಸುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಮದ್ಯಪಾನ, ಮಾದಕ ವಸ್ತುಗಳು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕುರಿತು ಮನೋರೋಗ ತಜ್ಞರಾದ ಡಾ.ಸುಧಾರಾಣಿ ನಾಯಕ್ ಜಾಗೃತಿ ಮೂಡಿಸಿದರು.

ವಾರ್ತಾ ಇಲಾಖೆಯ ಉಪನಿರ್ದೇಶಕ ಡಿ.ಅಶೋಕ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹದೇವಸ್ವಾಮಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಮನೋಜ್‌ಕುಮಾರ್, ಶಿವಪ್ರಸಾದ್, ಚನ್ನಬಸವಣ್ಣ, ಎಂ.ಎಸ್.ಸುನೀಲ್ ಇದ್ದರು.

ಚಿತ್ರ ಸಂಖ್ಯೆ…7
*ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಕುಮಾರಸ್ವಾಮಿ ಉದ್ಘಾಟಿಸಿದರು. ಗಿರೀಶ್, ಡಾ.ಸುಧಾರಾಣಿ ನಾಯಕ್, ಡಿ.ಅಶೋಕ್‌ಕುಮಾರ್, ಡಾ.ಮಹದೇವಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net