

ಶಿರಸಿ: ಸತ್ಸಂಗವು ದೇವರ ಸಾನ್ನಿಧ್ಯದ ವಾತಾವರಣ ಕೊಡುತ್ತದೆ. ಅದರಿಂದ ಮನಸ್ಸು ಸದ್ವಿಚಾರಕ್ಕೆ ತೊಡಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಸೋಮವಾರ ಮೆಣಸಿ ಸೀಮೆಯ ಶಿಷ್ಯರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಸದ್ವಿಚಾರ ಎಂದರೆ ದೇವರು, ಗುರು ಪರಂಪರೆ, ಏಕಾಗ್ರತೆ, ಭಕ್ತಿ, ಮುಕ್ತಿ ಸಂಗತಿಗಳೇ ಓಡಾಡುತ್ತವೆ. ಸದ್ ಗ್ರಂಥ ಓದಿದರೂ ಸದ್ವಿಚಾರಗಳು ಬರುತ್ತವೆ ಎಂದರು.
ಈಚೆಗಿನ ವರ್ಷದಲ್ಲಿ ಸಮಾಜದಲ್ಲಿ ಅಸದ್ ವಿಚಾರಗಳು ಹೆಚ್ಚಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಸದ್ವಿಚಾರಗಳು ಕಡಿಮೆ. ಕೇಳಬಾರದ, ನೋಡಬಾರದ ವಿಚಾರಗಳನ್ನೇ ಕೇಳುವುದು, ನೋಡುವುದು ಆಗಿದೆ ಎಂದರು.
ಮೊಬೈಲ್‌ಫೋನ್ ಗೇಮ್ ಕೂಡ ಹೆಚ್ಚಾಗಿದೆ. ಅನೇಕರು ಅದನ್ನು ಅತಿಯಾಗಿ ಬಳಸಿ ದುಸ್ಥಿತಿಗೆ ಹೋಗುತ್ತಿದ್ದಾರೆ. ಮೊಬೈಲ್ ಗೇಮ್ ಕಾರಣದಿಂದಲೇ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಕೂಡ ನಡೆದಿವೆ. ಬೇರೆ ಬೇರೆ ಅನಾಹುತಗಳೂ ಆಗುತ್ತಿವೆ ಎಂದೂ ಆತಂಕ ವ್ಯಕ್ತಪಡಿಸಿದರು.
ಸದ್ವಿಚಾರಗಳಿಗೆ ಮನಸ್ಸು ಒಳಪಡದೆ ಹೋದರೆ ಮನಸಿನ ದಿಕ್ಕು ಬದಲಾಗುತ್ತದೆ. ಮನಸಿನಲ್ಲಿ ಸದ್ವಿಚಾರದ ಕೃಷಿ ಮಾಡದೇ ಹೋದರೆ, ಕಳೆಗಳು ಬೆಳೆಯುತ್ತವೆ. ಗದ್ದೆಯಲ್ಲಿ ಉಳುಮೆ ಮಾಡದೇ ಹೋದರೆ ಏನಾಗುತ್ತದೋ ಹಾಗೆ ಆಗುತ್ತದೆ. ಸದ್ವಿಚಾರಗಳಿಂದ ಏಕಾಗ್ರತೆ, ನಿಶ್ಚಲದಿಂದ ಧ್ಯೇಯ ಬರುತ್ತದೆ. ಸದ್ವಿಚಾರಗಳು ಇರದೇ ಹೋದರೆ ಭಯದ ತೀವ್ರತೆ ಹೆಚ್ಚುತ್ತದೆ. ನರಗಳ ವ್ಯಾಧಿಗಳು ಆರಂಭವಾಗುತ್ತವೆ. ಮನಸನ್ನು ಅಸದ್ವಿಚಾರಗಳು ನಿಶ್ಚಲಗೊಳಿಸುತ್ತವೆ. ಸತ್ಸಂಗ ಮಾಡಿದರೆ ಮನಸು ಕ್ರಿಯಾಶೀಲವಾಗಿ ಇರುತ್ತದೆ, ಒಳಿತಾಗುತ್ತದೆ ಎಂದರು.
ಭರತ್ ಭಟ್ಟ ಅವರ ನೇತೃತ್ವದಲ್ಲಿ ಪಾದಪೂಜೆಗಳು ನಡೆದವು. ಆರ್.ಎಸ್. ಹೆಗಡೆ ಭೈರುಂಬೆ, ರಾಜಾರಾಮ ಭಟ್ಟ ಸೊಣಗಿಮನೆ, ರಮಾಕಾಂತ ಹೆಗಡೆ ಮಂಡೇಮನೆ, ರವಿ ಹೆಗಡೆ ವಾದರಜಡ್ಡಿ, ನಾರಾಯಣ ಹೆಗಡೆ ಕೆರೆಗದ್ದೆ, ಜಯಲಕ್ಷ್ಮಿ ಹೆಗಡೆ ಇತರರು ಇದ್ದರು.
ಸದ್ವಿಚಾರಗಳಿಂದ ಚಂಚಲತೆಯಿಲ್ಲ. ಅಸದ್ವಿಚಾರಗಳಿಂದ ಜಾಡ್ಯ, ಚಂಚಲತೆ. ಸತ್ಸಂಗದಿಂದ ಸದ್ವಿಚಾರ. ಸತ್ಸಂಗಕ್ಕೋಸ್ಕರ ಚಾತುರ್ಮಾಸ್ಯದಲ್ಲಿ ಸೀಮಾ ಭಿಕ್ಷಾ ಸೇವೆ ವಿಧಾನ ಬಂದಿದೆ.I ಸ್ವರ್ಣವಲ್ಲೀ ಶ್ರೀ