ಜನಸ್ನೇಹಿಯಾಗದಿದ್ದರೆ ಪರಿಣಾಮ ಎದುರಿಸಿ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಿರಣ್ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು. ಜಯಂತಿ ಶಿವಕುಮಾರ್, ಬಿ.ಆರ್.ಮಹೇಶ್, ಮೋಹಿನಿ ಮತ್ತಿತರರು ಇದ್ದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಿರಣ್ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು. ಜಯಂತಿ ಶಿವಕುಮಾರ್, ಬಿ.ಆರ್.ಮಹೇಶ್, ಮೋಹಿನಿ ಮತ್ತಿತರರು ಇದ್ದರು.
Published on

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡದಿದ್ದರೆ ಅದರ ದುಷ್ಪರಿಣಾಮವನ್ನು ಅನುಭವಿಸಲು ಸಿದ್ಧರಾಗಿರಬೇಕು. ತಪ್ಪು ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಸದಸ್ಯರು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಪಂಚಾಯಿತಿ ಸಿಬ್ಬಂದಿ ಕಾರ್ಯವೈಖರಿಯಿಂದ ಜನರು ರೋಸಿ ಹೋಗಿದ್ದಾರೆ ಎಂದು ಸರ್ವ ಸದಸ್ಯರು ಆರೋಪಿಸಿದರು.

ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ನೀರುಗಂಟಿಗಳನ್ನು ಹೊರತುಪಡಿಸಿ, ಉಳಿದ ಗುತ್ತಿಗೆ ಆಧಾರದ ಸಿಬ್ಬಂದಿಗೆ ಮೂರು ವರ್ಷಕ್ಕೆ ಮಾತ್ರ ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿವರ್ಷ ಬೇರೆ ಬೇರೆ ಹುದ್ದೆಗಳಿಗೆ ಬದಲಾವಣೆ ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸದಸ್ಯರಾದ ಶೀಲಾ ಡಿಸೋಜ, ಜೀವನ್, ಕಿರಣ್, ಮೃತ್ಯುಂಜಯ, ವಿನಯ್ ಆಗ್ರಹಿಸಿದರು.

ಈ ವಿಷಯದ ಸಾಧಕ-ಬಾಧಕ ಬಗ್ಗೆ ಅರೋಗ್ಯ ನಿರೀಕ್ಷಕ ಜಾಸ್ಮಿನ್ ಖಾನ್ ಸಭೆಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಸಭೆಯಲ್ಲಿ ಈ ಸಂಬಂಧ ನಿರ್ಣಯವನ್ನು ಕೈಗೊಳ್ಳಲಾಯಿತು.

ಪಂಚಾಯಿತಿ ವಾಣಿಜ್ಯ ಮಳಿಗೆಗಳನ್ನು ಬಿಡುವ ಬಾಡಿಗೆದಾರರ ಮುಂಗಡ ನೀಡಿದ ಹಣವನ್ನು ವಾಪಸ್ ನೀಡಲು ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ಸದಸ್ಯರೊಬ್ಬರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಜಯಂತಿ ಶಿವಕುಮಾರ್, ಬಾಡಿಗೆ ಬಾಕಿ ಉಳಿಸಿಕೊಂಡವರು ಬಾಡಿಗೆ ಪಾವತಿಸಿ ನಂತರ ಅವರ ಮುಂಗಡ ಹಣವನ್ನು ವಾಪಸ್ ನೀಡಲಾಗುತ್ತದೆ. ಹಳೇ ಬಾಡಿಗೆದಾರರು ಪಂಚಾಯಿತಿಗೆ ಬಂದು ತಮ್ಮ ಸಮಸ್ಯೆ ತಿಳಿಸಬೇಕು ಎಂದು ಹೇಳಿದರು.

ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮಾನವೀಯ ದೃಷ್ಟಿಯಿಂದ ಉಚಿತ ನಿವೇಶನ ನೀಡಬೇಕಿದೆ ಎಂದು ಸದಸ್ಯ ಪಿ.ಕೆ.ಚಂದ್ರು ಹೇಳಿದರು. ಕಾಯಂ ಪೌರಕಾರ್ಮಿಕರಿಗೆ ಗುಂಪು ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಬೇರೆ ರೀತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉಚಿತ ನಿವೇಶನ ನೀಡಲು ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

2023ರಿಂದಲೂ ಹೊಸ ಬಡಾವಣೆಯಲ್ಲಿ ಗುತ್ತಿಗೆ ಅಧಾರದ ಪೌರಕಾರ್ಮಿಕರಿಗೆ ನಿವೇಶನ ನೀಡುತ್ತೇವೆ ಎಂದು ಆಡಳಿತ ಮಂಡಳಿ ಪಟ್ಟಿ ಮಾಡಿಕೊಂಡು, ಪೌರಕಾರ್ಮಿಕರಿಗೆ ಕನಸು ಕಟ್ಟಿಕೊಟ್ಟಿದೆ. ಈ ವಿಷಯವನ್ನು ಹಿಂದಿನ ಮುಖ್ಯಾಧಿಕಾರಿ ಯಾಕೆ ಸಭೆಗೆ ತಿಳಿಸಿಲ್ಲ ಎಂದು ನಾಮನಿರ್ದೇಶನ ಸದಸ್ಯ ಕಿರಣ್ ಪ್ರಶ್ನಿಸಿದರು.

ಪೌರ ಕಾರ್ಮಿಕರಿಗೆ ನಿವೇಶನ ನೀಡುವಂತೆ ಶಾಸಕ ಡಾ. ಮಂತರ್‌ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಬಿ.ಆರ್.ಮಹೇಶ್ ಹೇಳಿದರು. ಕಾನೂನಿನಲ್ಲಿ ಅವಕಾಶವಿದ್ದರೆ ನಿವೇಶನ ನೀಡಿ ಎಂದು ಹೇಳಿರಬಹುದು. ಇದಕ್ಕೆಲ್ಲ ಆಡಳಿತ ಮಂಡಳಿ ಹೊಣೆ ಹೊರಬೇಕು ಎಂದು ಕಿರಣ್ ಹೇಳಿದರು.

ಬಸವೇಶ್ವರ ರಸ್ತೆಯಲ್ಲಿ ನಿವಾಸಿಯೊಬ್ಬರು 5.5 ಸೆಂಟ್ ಜಾಗಕ್ಕೆ ಫಾರ್ಮ್-3 ಸಲ್ಲಿಸಿದ್ದಾರೆ. ಹಿಂದಿನ ಆರ್‌ಐ ಕೈಚಳಕದಿಂದ ಫಾರ್ಮ್-3ಗೆ 8.5 ಸೆಂಟ್ ಎಂದು ದಾಖಲಿಸಲಾಗಿತ್ತು. ಈ ದಾಖಲೆಗಳು ನನ್ನ ಕೈಸೇರಿ ದೂರು ನೀಡಿದ ನಂತರ ಮತ್ತೊಮ್ಮೆ ತಿದ್ದುಪಡಿ ಮಾಡಿ 5.5 ಸೆಂಟ್ ಎಂದು ದಾಖಲಿಸಲಾಗಿದೆ. ಇಂತಹ ಅವ್ಯವಹಾರಗಳು ಪಂಚಾಯಿತಿಯೊಳಗೆ ಎಷ್ಟೋ ನಡೆದಿರಬಹುದು ಎಂದು ಕಿರಣ್ ದೂರಿದರು.

ತಿದ್ದುಪಡಿ ಮಾಡಿದ್ದೇವೆ ಎಂದು ಮುಖ್ಯಾಧಿಕಾರಿ ಸಮಜಾಯಿಷಿ ನೀಡಿದರು. ಮಾಡಿದ ತಪ್ಪನ್ನು ತಿದ್ದುಪಡಿ ಮಾಡಲು ನೀವ್ಯಾರು? ಕಾರಣಕರ್ತರಾದ ಮುಖ್ಯಾಧಿಕಾರಿ ಮತ್ತು ಆರ್‌ಐ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಕೊಡಿ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net