ಸ್ಥಿತಪ್ರಜ್ಞರಾಗಿದ್ದರೆ ಯಾವ ರೋಗಗಳೂ ಬಾಧಿಸಲ್ಲ

h16-Health Camp 3
Published on

ಹುಬ್ಬಳ್ಳಿ: ಎಂಥದ್ದೇ ಒತ್ತಡಗಳಿರಲಿ, ಸ್ಥಿತಪ್ರಜ್ಞರಾಗಿದ್ದರೆ ಯಾವುದೇ ರೋಗಗಳು ಬಾಧಿಸುವುದಿಲ್ಲ. ಜೀವನ ಶೈಲಿ, ಆಹಾರ ಪಥ್ಯೆ, ಯೋಗ-ವ್ಯಾಯಾಮಗಳನ್ನು ನಿತ್ಯವೂ ಜೀನವದಲ್ಲಿ ರೂಢಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಲಹೆ ನೀಡಿದರು.

ಆಶಾ ಡಯಾಬಿಟಿಕ್ ಟ್ರಸ್ಟ್ ಆ್ಯಂಡ್ ರಿಸರ್ಚ್ ಫೌಂಡೇಷನ್ ಹಾಗೂ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿಯ ಬಿವಿಬಿ ಕಾಲೇಜ್‌ನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಧುಮೇಹ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಆರೋಗ್ಯ ಸುಧಾರಣೆ ಜತೆಗೆ ವಿಶ್ವವೇ ಆರೋಗ್ಯದಿಂದಿರಬೇಕು ಎಂದು ಇಚ್ಛಿಸಿದರು. ವಿಶ್ವಸಂಸ್ಥೆ ಮೂಲಕ ವಿಶ್ವ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸುವಂತೆ ಮಾಡಿದರು. ಈಗ ನೂರಾರು ರಾಷ್ಟ್ರಗಳು ಯೋಗ ದಿನವನ್ನು ಆಚರಿಸುತ್ತಿವೆ. ಯೋಗ ಕಲಿತ ಗುರುಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ ಎಂದರು.

ಜೀವನದಲ್ಲಿ ಸಮತೋಲನೆ, ಶಾಂತ ಚಿತ್ತವನ್ನು ಹೊಂದಿರಬೇಕು. ಎಂಥದ್ದೇ ಸಂದರ್ಭ ಬರಲಿ ಒತ್ತಡಕ್ಕೆ ಒಳಗಾಗಬಾರದು. ಬಂದ ಕೆಟ್ಟ ಗಳಿಗೆಗೆ ಪರಿಹಾರವೂ ಇರುತ್ತದೆ ಎಂಬುದನ್ನು ಮರೆಯಬಾರದು. ಇಷ್ಟಿದ್ದರೆ ಸಾಕು ಮನೋದೈಹಿಕ ಆರೋಗ್ಯದಿಂದರಲಿದೆ ಎಂದರು.

ಖ್ಯಾತ ಮಧುಮೇಹ ಹಾಗೂ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ಭಾರತವು ಮಧುಮೇಹದ ರಾಜಧಾನಿಯಾಗಿದೆ. ಮಧುಮೇಹ ನಿಯಂತ್ರಣ ಹಾಗೂ ಬಾರದಂತೆ ಇರಲು ತೂಕ ಇಳಿಸಿಕೊಳ್ಳಬೇಕು. ಸ್ಕಿಪ್ಪಿಂಗ್, ಈಜು, ವೇಗದ ನಡಿಗೆಗಳನ್ನು ರೂಢಿಸಿಕೊಳ್ಳಬೇಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಒಟ್ಟಾರೆಯಾಗಿ ಜೀವನ ಶೈಲಿಯಲ್ಲಿ ಸುಧಾರಣೆ ಕಂಡುಕೊಳ್ಳಬೇಕು. ಇದರಿಂದ ಯಾವುದೇ ರೋಗದಿಂದ ದೂರ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೆಎಲ್‌ಇ ತಾಂತ್ರಿಕ ವಿವಿ ಉಪ ಕುಲಪಡಿ ಡಾ. ಪ್ರಕಾಶ ತೇವರಿ ಮಾತನಾಡಿ, ವಿದೇಶಗಳಲ್ಲಿ ಕೆಲಸಕ್ಕೆ ನಿಗದಿತ ಅವಧಿ ಇದೆ. ಭಾರತದಲ್ಲಿ ಕಾರ್ಪೋರೇಟ್ ವಲಯ ಅಥವಾ ಸರ್ಕಾರಿ ವಲಯಗಳಿರಲಿ ಕೆಲಸಕ್ಕೆ ಸಮಯದ ಮಿತಿ ಇಲ್ಲ. ಇಂಥದ್ದರ ಮಧ್ಯೆ ಜೀವನ ಶೈಲಿಯಲ್ಲಿ ು ಬದಲಾವಣೆ ಕಂಡುಕೊಳ್ಳಲೇಬೇಕು. ಆರೋಗ್ಯ ಸುಧಾರಿಸಿಕೊಳ್ಳಲೇಬೇಕು ಎಂದು ಸಲಹೆ ನೀಡಿದರು.

ಉದ್ಯಮಿಗಳಾದ ಎಂ.ವಿ. ಕರಮರಿ, ಮಹೇಂದ್ರ ಟಕ್ಕರ್, ಜಯಪ್ರಕಾಶ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಯಿತು.

ಕೆಎಲ್‌ಇ ತಾಂತ್ರಿಕ ವಿವಿ ಡೀನ್ ಪ್ರೊ. ಸಂಜಯ ಕೊಟಬಾಗಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಫೌಂಡೇಷನ್ ಅಧ್ಯಕ್ಷ ಮಹೇಂದ್ರ ವಿಕಂಶಿ, ಜಗದೀಶ ಮಠದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net