

ಬಾಗಲಕೋಟೆ: ಯಾರ ಬಗ್ಗೆಯೂ ಗಟ್ಟಿ ಧ್ವನಿಯಲ್ಲಿ ಮಾತನಾಡದ ಸಂಸದ ಪಿ.ಸಿ.ಗದ್ದಿಗೌಡರ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಸಿಎಂ ಹೆಸರಿಗೆ ಮಾತ್ರ ಸಮಾಜವಾದಿ ಆಗಿದ್ದಾರೆ. ತಮ್ಮಲ್ಲಿ ಸ್ವಾರ್ಥ, ಮಕ್ಕಳಿಗೆ ಅಧಿಕಾರ ಮತ್ತು ಅವರನ್ನು ಶ್ರೀಮಂತರನ್ನಾಗಿಸುವ ಮನೋಭಾವ ತುಂಬಿಕೊಂಡಿದ್ದಾರೆ. ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಅವರಿಗೆ ಗೊತ್ತಿಲ್ಲದೆ ಆಗಿದ್ದಲ್ಲ. ಅವೆಲ್ಲವೂ ಅವರಿಗೆ ಗೊತ್ತಿದ್ದೇ ಆಗಿವೆ. ಹೀಗಾಗಿ ಸಿದ್ದರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಬಾಗಲಕೋಟೆ ನವನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಕುರಿತು ಸುದ್ದಿಗೋಷ್ಠಿ ನಡೆಸಿ, ಹಿಂದಿನ ಜನತಾ ಪರಿವಾರದ ಸ್ನೇಹಿತ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮುಡಾದಿಂದ ತಮ್ಮ ಪತ್ನಿಗೆ 14 ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಅವರು, ಸಿಎಂ ಭಾವನೆ ಏನು ಎನ್ನುವುದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ನೀವು(ಬಿಜೆಪಿ) ನನ್ನ ಹಗರಣ ಕೆದಕಿದರೆ ನಾನು ನಿಮ್ಮ ಹಗರಣ ಕೆದಕುವೆ ಎನ್ನುವ ಅಂಜಿಕೆ ಹಾಕುತ್ತಿದ್ದಾರೆ. ತಾವು ಹಿಂದುಳಿದ ವರ್ಗದಿಂದ ಬಂದು 2ನೇ ಸಲ ಸಿಎಂ ಆಗಿದ್ದಕ್ಕೆ ಬಿಜೆಪಿಗೆ ಹೊಟ್ಟೆ ಉರಿ ಎಂದಿದ್ದಕ್ಕೂ ಟಾಂಗ್ ಕೊಟ್ಟ ಗದ್ದಿಗೌಡರ, ಅವರು ತಮ್ಮ ಮಾತುಗಳಿಂದ ಎಷ್ಟೇ ಜನರನ್ನು ಕೆರಳಿಸಿದರೂ ಅವರ ಮನೋಭಾವ ಜನರಿಗೆ ಗೊತ್ತಾಗಿದೆ. ನಾನು ಅನೇಕ ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ನೋಡುತ್ತ ಬಂದಿದ್ದೇನೆ. ಅವರು ಹೇಳುವುದು ಒಂದು, ಕೃತಿ ಮತ್ತೊಂದು ಇರುತ್ತದೆ. ಬರೀ ವೋಟು ಪಡೆಯಲು ಮಾತ್ರ ರಾಜಕಾರಣ ಮಾಡುತ್ತ ಬಂದಿದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಜನರ ಕಲ್ಯಾಣಕ್ಕೆ ಕೆಲಸ ಮಾಡಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ನಿಯಮ ಗಾಳಿಗೆ ತೂರಿ ಮುಡಾದಿಂದ ಪತ್ನಿ ಹೆಸರಲ್ಲಿ ನಿವೇಶನ ಪಡೆದಿದ್ದಾರೆ. ಉನ್ನತ ಸ್ಥಾನದಲ್ಲಿ ಇರುವ ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ಲದೆ ಇರುತ್ತಾ? ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣವಾಗಿದೆ. ಹೀಗಾಗಿ ಈ ಬಗ್ಗೆ ತನಿಖೆಯಾಗಿ ಸತ್ಯ ಹೊರಬರುವವರೆಗೂ ಸಿದ್ದರಾಮಯ್ಯ ಕೂಡಲೇ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ತಾವು ಪ್ರಾಮಾಣಿಕ ಎನ್ನುತ್ತಾರೆ. ಅವರು ಬಾದಾಮಿ ಶಾಸಕರಾಗಿದ್ದಾಗ ನಾನೆಲ್ಲ ನೋಡಿದ್ದೇನೆ. ಪ್ರಾಮಾಣಿಕ ರಾಜಕಾರಣಿ ಆಗಿದ್ದರೆ ತಮ್ಮ ಮೇಲೆ ಗಂಭೀರ ಆರೋಪ ಇದ್ದಾಗ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಹಿಂದೆ ರಾಮಕೃಷ್ಣ ಹೆಗಡೆ ಮಾತ್ರವಲ್ಲ, ಲಾಲಕೃಷ್ಣ ಆಡ್ವಾಣಿ ಅವರು ಸಹ ತಮ್ಮ ಮೇಲೆ ಅಪಾದನೆ ಬಂದ ತಕ್ಷಣ ರಾಜೀನಾಮೆ ಕೊಟ್ಟಿದ್ದರು ಎಂದು ಸಿದ್ದರಾಮಯ್ಯಗೆ ನೆನಪಿಸಿದರು. ಸಾಮಾನ್ಯ ಕುಟುಂಬದಿಂದ ಬಂದಿರುವ ಸಿದ್ದರಾಮಯ್ಯ ತಮ್ಮ ಪತ್ನಿಗೆ 3.16 ಎಕರೆ ಜಾಗಕ್ಕೆ 62 ಕೋಟಿ ರೂ. ಬರಬೇಕಿತ್ತು ಎನ್ನುತ್ತಾರೆ. ಅವರು ಈಗ ಸಿಎಂ ಆಗಿದ್ದಾರಲ್ಲ, ಜನಸಾಮಾನ್ಯರ ಜಮೀನಿಗೂ ತಮ್ಮ ಸರಿಸಮಾನವಾಗಿ ಹಣ ಕೊಡಿಸುವ ಪ್ರಯತ್ನ ಮಾಡಬೇಕು. ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಬಗ್ಗೆ ಇಡೀ ದೇಶದ ಜನರಿಗೆ ಗೊತ್ತಾಗಬೇಕು. ಈ ಬಗ್ಗೆ ನಮ್ಮ ಬಿಜೆಪಿ ಮುಖಂಡರು ಈಗಾಗಲೇ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಎನ್ನುವ ಸಂವಿಧಾನಬದ್ಧ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರಿಗೂ ಬಿಜೆಪಿ ಹೋರಾಟ ನಿಲ್ಲಿಸಲ್ಲ. ಈ ಹಿಂದೆ ಅರ್ಕಾವತಿ ಹಗರಣದಲ್ಲಿ ಬಿಜೆಪಿ ಹಿಂದೆ ಸರಿದಿರಲಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಎಸಿಬಿ ಜಾರಿಗೆ ತಂದು ಕ್ಲೀನ್‌ಚಿಟ್ ಪಡೆದುಕೊಂಡರು. ಇವತ್ತು ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಎಲ್ಲ ಮಾಧ್ಯಮಗಳಲ್ಲೂ ಅಂಕಿ ಸಂಖ್ಯೆ ಸಮೇತವಾಗಿ ವಿವರವಾಗಿ ಬರುತ್ತಿದೆ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ ಬೇರೆಯದ್ದಕ್ಕೆ ಬಳಕೆ ಮಾಡಲು ಅವಕಾಶ ಇಲ್ಲ. ಆದರೂ ಸರ್ಕಾರ ಅದನ್ನು ಗ್ಯಾರಂಟಿಗಳಿಗೆ ಬಳಿಕೆ ಮಾಡುತ್ತಿದೆ. ದೇಶದಲ್ಲಿ ಮೀಡಿಯಾಗಳು ಇಷ್ಟೊಂದು ಸ್ಟ್ರಾಂಗ್ ಆಗಿ ಕೆಲಸ ಮಾಡುತ್ತಿವೆ. ಇದೆಲ್ಲ ಗೊತ್ತಿದ್ದರೂ ಅದ್ಹೇಗೆ ಇಂಥ ಹಗರಣಗಳನ್ನು ಮಾಡುತ್ತಾರೋ ಗೊತ್ತಾಗುತ್ತಿಲ್ಲ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರ ಇದ್ದರು.