

ಕೆಜಿಎಫ್: ದಸ್ತಾವೇಜುಗಳ ನೋಂದಣಿಗೆ ಯಾರಾದರೂ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ಕಚೇರಿಯ ಹೊರಗೆ ನೋಟಿಸ್ ಬೋರ್ಡ್ನಲ್ಲಿ ಲೋಕಾಯುಕ್ತ ಪೊಲೀಸರ ದೂರವಾಣಿ ಸಂಖ್ಯೆ ನಮೂದಿಸಿದ್ದು, ಆ ನಂಬರಿಗೆ ಕರೆ ಮಾಡಿ ತಮ್ಮಲ್ಲಿ ದೂರನ್ನು ದಾಖಲಿಸಬಹುದು ಎಂದು ನ್ಯಾಯಾಧೀಶ ವಿನೋದ್ ಕುಮಾರ್ ಹೇಳಿದರು.
ನಗರದ ತಾಲೂಕು ಆಡಳಿತ ಭವನದಲ್ಲಿನ ಉಪ ನೋಂದಣಾಧಿಕಾರಿಗಳ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಯನ್ನು ಕಾವೇರಿ 2.0 ತಂತ್ರಾಂಶದಲ್ಲಿ ಪೂರ್ವ ನಿಯೋಜಿತವಾಗಿ ಅಪ್ಲೋಡ್ ಮಾಡಿ ಕೆ2 ಚಲನ್ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂದಾಯ ಮಾಡಿರುವುದರಿಂದ ಕಚೇರಿಯಲ್ಲಿ ಬೇರೆ ಯಾರಿಗೂ ದಸ್ತಾವೇಜುಗಳ ನೋಂದಣಿಗೆ ಹಣ ನೀಡುವ ಅಗತ್ಯವಿಲ್ಲ ಎಂದರು.
ಕೆಲವೊಮ್ಮೆ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆಗಳಿದ್ದಲ್ಲಿ ದಸ್ತಾವೇಜುಗಳ ನೋಂದಣಿ ನಿಗದಿತ ಸಮಯದಲ್ಲಿ ಮಾಡಲು ಸಾಧ್ಯವಾಗದೇ ಇರುವಂತಹ ವೇಳೆ ಸಾರ್ವಜನಿಕರೂ ಉಪ ನೋಂದಣಾಧಿಕಾರಿಗಳೊಂದಿಗೆ ಸಹಕಾರ ನೀಡಬೇಕು. ಏಕೆ ತಡವಾಗುತ್ತಿದೆ, ಎಷ್ಟು ಸಮಯದಲ್ಲಿ ನೋಂದಣಿ ಕಾರ್ಯ ಸಂಪೂರ್ಣವಾಗುತ್ತದೆ. ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ನ್ಯಾಯಾಲಯದ ತಡೆಯಾಜ್ಞೆ ಇರುವ ಪ್ರಕರಣಗಳಲ್ಲಿ ರ್ನಿದಿಷ್ಟವಾಗಿ ನ್ಯಾಯಾಲಯದಿಂದ ನಿರ್ದೇಶನ ಇದ್ದಲ್ಲಿ ಅಥವಾ ನಾಟ್ ಟು ಎಲಿಯನೇಟ್ ಎಂದು ನಮೂದು ಮಾಡಿದ್ದಾಗ ಮಾತ್ರ ಅಂತಹ ಕಡತಗಳನ್ನು ಹೋಲ್ಡ್ ಮಾಡಿ ಮುಂದಕ್ಕೆ ಹೋಗಿ. ನ್ಯಾಯಾಲದಿಂದ ತಡೆಯಾಜ್ಞೆ ಇದ್ದು ನಿಮ್ಮ ಗಮನಕ್ಕೆ ಬಂದಲ್ಲಿ ಅಂತಹ ಕಡತಗಳನ್ನು ನೋಂದಣಿ ಮಾಡುವುದಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದರು.
ನ್ಯಾಯಾಲಯದ ತಡೆಯಾಜ್ಞೆ ಇರುವಂತಹ ಸ್ವತ್ತುಗಳಿಗೆ ಸಂಬಂಧಿಸಿದಂತೆ ವಕೀಲರು ಅಥವಾ ಕ್ಲೆಂಟ್ಗಳು ಯಾರಾದರೂ ಬಂದಲ್ಲಿ ಅವರಿಗೆ ಆ ರ್ನಿದಿಷ್ಟ ಸ್ವತ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರ ಬಗ್ಗೆ ಹಿಂಬರಹವನ್ನು ನೀಡಿ ಕಳುಹಿಸುವಂತೆ ಸೂಚಿಸಿದರು.
ಪಿ&ನಂಬರ್ಗಳ ನೋಂದಣಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಪೋಡಿ ಮತ್ತು ದುರಸ್ತಿ ಕಾರ್ಯ ಮುಗಿಸಿ ಹಲವು ವರ್ಷಗಳಿಂದ ಅನುಭವದಲ್ಲಿರುವಂತಹ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಹಸೀಲ್ದಾರ್ ಭರತ್ಗೆ ತಿಳಿಸಿದರು.
ಉಪ ನೋಂದಣಾಧಿಕಾರಿ ಗಿರೀಶ್ ಮಾತನಾಡಿ, ಮೊದಲ ಹಂತದ ಪರಿಸ್ಥಿತಿ ಈಗ ಇಲ್ಲ. ಕಾವೇರಿ 2.0 ತಂತ್ರಾಂಶದ ಮೂಲಕ ನಾಗರಿಕರಿಗೆ ತಮ್ಮ ದಸ್ತಾವೇಜುಗಳನ್ನು ಸಿಟಿಜನ್ ಲಾಗಿನ್ ಪೋರ್ಟಲ್ ಮೂಲಕ ಅಪ್ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಭೂಮಿ ಮತ್ತು ಕಾವೇರಿ ತಂತ್ರಾಂಶ ಎರಡೂ ಸಹ ಇಂಟಿಗ್ರೇಟೆಡ್ ಆಗಿರುವುದರಿಂದ ಯಾವುದೇ ಸ್ವತ್ತಿನ ಮೇಲೆ ನ್ಯಾಯಾಲಯದ ತಡೆಯಾಜ್ಞೆ ಇರುವುದು ದಸ್ತಾವೇಜನ್ನು ಅಪ್ಲೋಡ್ ಮಾಡುವ ಸಮಯದಲ್ಲೇ ಕಾವೇರಿ 2.0 ತಂತ್ರಾಂಶದ ಪರದೆಯ ಮೇಲೆಯೇ ಪ್ರದರ್ಶನವಾಗುವುದರಿಂದ ಯಾವುದೇ ಸಮಸ್ಯೆ ಉದ್ಬವಿಸಲಾಗದು ಎಂದರು. ನ್ಯಾಯಾಧೀಶ ವಿನೋದ್ ಕುಮಾರ್, ತಹಸೀಲ್ದಾರ್ ಭರತ್, ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ವಕೀಲೆ ಕಲೈಸೆಲ್ವಿ ಇದ್ದರು.