

ರಾಯಚೂರು: ಮಹಿಳೆಯರು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜದ ಆರೋಗ್ಯವೂ ಸ್ಥಿರವಾಗಿರಲಿದ್ದು, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದರು.
ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂದೆ ಬರುತ್ತಿದ್ದು, ಮಹಿಳೆಯರು ಎದುರಿಸುವ ಸವಾಲುಗಳನ್ನು ನಿವಾರಿಸಲು ಸರ್ಕಾರ ಸಹಕಾರ ನೀಡುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ಮಹಿಳೆಯರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು.
ಬೇರೆ ದೇಶದಲ್ಲಿ ಮಹಿಳೆಯರಿಗೆ ಮತದಾನಕ್ಕೆ ವಿಳಂಬವಾಗಿ ಅವಕಾಶ ನೀಡಿದ್ದು, ಭಾರತದಲ್ಲಿ ಮಾತ್ರ ಸಂವಿಧಾನ ಜಾರಿಯಾದ ದಿನದಿಂದಲೇ ಪುರುಷರಿಗೆ ಸಮಾನವಾಗಿ ಮತದಾನ ಮಾಡುವ ಹಕ್ಕು ನೀಡಲಾಗಿದೆ. ಪ್ರತಿಯೊಬ್ಬ ಮಹಿಳೆಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ರಾಹುಲ್ ತುಕಾರಾಮ್ ಪಾಂಡ್ವೆ ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಜಿಲ್ಲಾ ಹಿಂದುಳೀದ ವರ್ಗಗಳ ಕಲ್ಯಾಣಾಕಾರಿ ಡಾ.ಬಿ.ವೈ.ವಾಲ್ಮೀಕಿ, ಸಂಘ ಸಂಸ್ಥೆಗಳ ಪದಾಕಾರಿಗಳಾದ ಶರಣಮ್ಮ, ಮಹಾಂತೇಶ ಬಿರಾದರ, ಶ್ರೀದೇವಿ, ಶಶಿಕಲಾ ಭೀಮರಾಯ, ಈರಮ್ಮ ಉಪಸ್ಥಿತರಿದ್ದರು.