ಲೋಕಸಭೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ನಮ್ಮ ಸರ್ಕಾರ ಭದ್ರ: ಡಾ.ಎಚ್.ಸಿ.ಮಹದೇವಪ್ಪ

11
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ 20 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ನಗರದ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಬರಗಾಲವಿದ್ದು ನಮ್ಮ ಸರ್ಕಾರದ ಯೋಜನೆಗಳು ಜನರಿಗೆ ತುಂಬಾ ಅನುಕೂಲವಾಗಿವೆ. ನಾವು 20ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ನಮ್ಮ ಸರ್ಕಾರ ಭದ್ರ. ನಾವೆಲ್ಲ ಒಗ್ಗಟ್ಟಿನಿಂದ ಗಂಭೀರವಾಗಿ ಕೆಲಸ ಮಾಡಬೇಕಿದೆ. ಏಕೆಂದರೆ ಮೈಸೂರು ಮುಖ್ಯಮಂತ್ರಿಗಳ ತವರು ಕ್ಷೇತ್ರ ಎನ್ನುವುದನ್ನು ಮರೆಯಬಾರದು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಉತ್ತಮವಾಗಿ ಕೆಲಸ ಮಾಡಿದ್ದರಿಂದ ಪಕ್ಷ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಕಳೆದ ಬಾರಿ ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದರಲ್ಲದೆ, ಜನರು ಭರವಸೆಗಳಿಗೆ ಒಲವು ತೋರಿದರು. ಕಳೆದ ಅವಧಿಯಲ್ಲಿ ನಾವು ಉತ್ತಮ ಆಡಳಿತ ನೀಡಿದ್ದರೂ ಸೂಕ್ತ ಪ್ರಚಾರ, ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದರಿಂದ ಹಿಂದಿನ ಚುನಾವಣೆಯಲ್ಲಿ ನಾವು ಸೋತೆವು. ಆದರೆ ಈಗ ಗ್ಯಾರಂಟಿಗಳು ಎಲ್ಲ ಜನರನ್ನು ತಲುಪಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ರಾಷ್ಟ್ರ ಮಟ್ಟದಲ್ಲಿ ಈಗ ಇಂಡಿಯಾ ಎಂದು ಹೆಸರಿಟ್ಟು ಹಲವಾರು ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಚುನಾವಣೆ ಎದುರಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಾವು 20 ಸ್ಥಾನ ಗೆಲ್ಲಬೇಕಿದೆ ಎಂದರು.
ಕೊಡಗಿನಲ್ಲಿ 20 ವರ್ಷಗಳ ನಂತರ ಇಬ್ಬರು ಶಾಸಕರು ಗೆದ್ದಿದ್ದಾರೆ. ಹಾಗಾಗಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಗೆಲ್ಲುವ ಎಲ್ಲ ಲಕ್ಷಣಗಳೂ ಇವೆ ಎಂದರು.
ನಗರಾಭಿವೃದ್ಧಿ ಸಚಿವ ಸುರೇಶ್ ಭೈರತಿ ಮಾತನಾಡಿ, ಕಾಂಗ್ರೆಸ್ ಈ ಕ್ಷೇತ್ರ ಗೆಲ್ಲಲೇಬೇಕಿದೆ. ಕ್ಷೇತ್ರದ ಹಾಲಿ ಸಂಸದರು ಕೋಮುವಾದಿಯಾಗಿದ್ದು, ಸುಳ್ಳು ಭರವಸೆ ನೀಡುತ್ತಿದ್ದಾರೆ. ಹಿಂದು-ಮುಸ್ಲಿಂ ನಡುವೆ ಕೋಮುಭಾವನೆ ಬಿತ್ತುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ಭರವಸೆ ಕಳೆದುಕೊಂಡಿದ್ದು, ಕಾಂಗ್ರೆಸ್ ಪರ ಒಲವು ತೋರಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆ ಈಡೇರಿಸಿದ್ದಾರೆ. ಹಾಗಾಗಿ ಮತದಾರರ ಬಳಿ ಹೆಮ್ಮೆಯಿಂದ ಹೋಗಿ ಮತ ಕೇಳಬಹುದು. ಯಾರೂ ಟೀಕೆ, ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡಬೇಕು. ಅಭಿಪ್ರಾಯ ಸಂಗ್ರಹಣೆಗೆ ಇದೇ ಕೊನೆ ಸಭೆಯಲ್ಲ. ಇನ್ನೂ ಎರಡರಿಂದ ಮೂರು ಸಭೆ ಇದ್ದು, ನಾವೆಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದು ಕೋರಿದರು.
ಕೊಡಗು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಜನರಲ್ಲಿ ದ್ವೇಷ ಭಾವನೆ ಬಿತ್ತುತ್ತಿರುವ ಸಂಸದ ಪ್ರತಾಪಸಿಂಹ ಎರಡು ಬಾರಿ ಗೆದ್ದಿದ್ದು, ಏನೂ ಸಾಧನೆ ಮಾಡಿಲ್ಲ. ಆದ್ದರಿಂದ ಅವರನ್ನು ಸೋಲಿಸುವಂತಹ ಸೂಕ್ತ ಅಭ್ಯರ್ಥಿಯನ್ನು ನಾವು ಕಣಕ್ಕೆ ಇಳಿಸಿ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.
ಶಾಸಕರಾದ ಹರೀಶ್‌ಗೌಡ, ಡಿ. ರವಿಶಂಕರ್, ಡಾ.ಮಂತರ್‌ಗೌಡ, ಮಾಜಿ ಶಾಸಕರಾದ ವಾಸು, ಎಚ್.ಪಿ. ಮಂಜುನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಕಾಂಗ್ರೆಸ್ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್‌ಗಳಾದ ಅಯೂಬ್ ಖಾನ್, ಪುಷ್ಪಲತಾ ಜಗನ್ನಾಥ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿ.ಪಂ. ಮಾಜಿ ಅಧ್ಯಕ್ಷರಾದ ಕೆ.ಮರಿಗೌಡ, ಬಿ.ಎಂ.ರಾಮು,ಮುಖಂಡರಾದ ಎಂ.ಶಿವಣ್ಣ, ಗಿರೀಶ್, ಶಿವಪ್ರಸಾದ್, ಮಾಧ್ಯಮ ವಕ್ತಾರ ಮಹೇಶ್, ನಗರಪಾಲಿಕೆ ಸದಸ್ಯೆ ಶೋಭಾ ಸುನೀಲ್, ಕೆಪಿಸಿಸಿ ಕಾರ್ಯದರ್ಶಿ ಚಂದ್ರಮೌಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net