

ಕುಮಟಾ: ನಮ್ಮ ಬದುಕಿನ ನಿರ್ಧಾರಗಳೆಲ್ಲವನ್ನೂ ನಮ್ಮ ಕುಟುಂಬ ಅಥವಾ ಸಮಾಜದ ಜತೆಗಿನ ಉತ್ಕಟ ಭಾವನಾತ್ಮಕ ಸಂಗತಿಗಳು ನಿರ್ಧರಿಸುವಂತಾಗಬಾರದು. ನಮ್ಮ ಪ್ರತಿ ಹೆಜ್ಜೆಯ ಬಗ್ಗೆ ಮೊದಲು ನಮಗೆ ಸ್ಪಷ್ಟತೆ ಇರುವುದು ಬದುಕಿನ ಸಾಧನೆ ಮತ್ತು ಯಶ ಕಾಣಲು ಕಾರಣವಾಗುತ್ತದೆ ಎಂದು ಚಲನಚಿತ್ರ ನಟ, ನಿರ್ದೇಶಕ ಆನಂದ ಹೇಳಿದರು.
ಪಟ್ಟಣದಲ್ಲಿ ಅಟ್ಲಾಸ್ ಪಾಯಿಂಟ್, ನೈಸ್ ಅಕಾಡೆಮಿ ಹಾಗೂ ಬೋಷ್ ಬ್ರಿಜ್ ಕೋರ್ಸ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಸಾಮರ್ಥ್ಯ ವೃದ್ಧಿ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು
ನಮ್ಮ ಜೀವನದ ಎಷ್ಟೋ ನಿರ್ಧಾರಗಳನ್ನು ನಮ್ಮ ಕುಟುಂಬ, ಸಮಾಜ, ಸುತ್ತಮುತ್ತಲಿನಿಂದ ನಿರ್ಧರಿತವಾಗುತ್ತಿರುವುದು ಅರ್ಥವಾಗುವ ಹೊತ್ತಿಗೆ ಸ್ವತಃ ಇನ್ನೆಲ್ಲೋ ಕಳೆದು ಹೋಗುವ ಅಪಾಯವಿರುತ್ತದೆ. ನಮ್ಮ ಗುರಿಯೆಡೆಗೆ ಬದುಕಿನ ಸಾಮ್ಯತೆ ಸಾಧಿಸುವುದಕ್ಕೆ ನಮ್ಮೊಳಗಿನ ಸ್ಪಷ್ಟತೆ ಮುಖ್ಯ. ಅದರಂತೆ ಕಲಿಕಾ ಸಂಸ್ಥೆಗಳ ಉದ್ದೇಶದೊಂದಿಗೆ ನಿಮ್ಮ ಉದ್ದೇಶವೂ ಮೇಳೈಸಿದರೆ ಸಫಲತೆಗೆ ಕಾರಣವಾಗುತ್ತದೆ ಎಂದರು.
ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೊಟ್ಟೆ ಹಸಿವಿಗಿಂತ ಉದ್ಯೋಗದ ಹಸಿವು ದೊಡ್ಡದಾಗಿದೆ. ನೌಕರಿ ಆಮಿಷಕ್ಕೆ ಮೋಸ ಹೋಗುವವರು ಹೆಚ್ಚಾಗಿದ್ದಾರೆ. ಸರ್ಕಾರಗಳು ಮಾಡುವ ಉದ್ಯೋಗ ಮೇಳಗಳು ಸಫಲವಾಗುತ್ತಿಲ್ಲ. ಪ್ರತಿಭಾವಂತರು, ವಿದ್ಯಾವಂತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಿಗೆ ಸಮರ್ಪಕವಾದ ದುಡಿಯುವ ಮಾರ್ಗದರ್ಶನ ಸಿಗಬೇಕಿದೆ ಎಂದರು.
ಅಟ್ಲಾಸ್ ಪಾಯಿಂಟ್ ವ್ಯವಸ್ಥಾಪಕ ನಿರ್ದೇಶಕ ಡಾ. ಸುರೇಶ ಚಿತ್ರಾಪು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳು ಬೆಳೆಯಬೇಕಿದೆ. ಅವರು ಉನ್ನತ ಅವಕಾಶಗಳಿಗೆ ಒಗ್ಗಿಕೊಳ್ಳುವ ಮನಸ್ಥಿತಿ ಬೆಳೆಯಬೇಕು. ನಮ್ಮಿಂದಾದ ಎಲ್ಲ ಸಹಯೋಗ ನೀಡುತ್ತೇವೆ ಎಂದರು.
ಡಿಜಿಎಂ ಸನಥ್ ಅಮೀನ್ ಮಾತನಾಡಿದರು. ನೈಸ್ ಅಕಾಡೆಮಿ ಸಂಸ್ಥಾಪಕ ಮಹೇಶ ಅಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಕಾಡೆಮಿಯ ನಿರ್ವಾಹಕಿ ನರ್ಮದಾ ಅಡಿ ನಿರ್ವಹಿಸಿದರು.