

ಕನಕಗಿರಿ: ಸಮಾಜದಲ್ಲಿ ವೈದ್ಯರು ಹಾಗೂ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದ್ದು, ಈ ವೃತ್ತಿಯಲ್ಲಿರುವವರು ತಮ್ಮ ಕರ್ತವ್ಯ ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇದನ್ನೂ ಓದಿ:ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಾಳೆ
ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಕರ ಕಲ್ಯಾಣ ನಿಧಿ, ನಾನಾ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಂಡ ಗಂಗಾವತಿ ತಾಲೂಕು ಮಟ್ಟದ ಡಾ.ಎಸ್.ರಾಧಾಕೃಷ್ಣನ್ 137ನೇ ಜನ್ಮದಿನ ಹಾಗೂ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈದ್ಯರು ಮನುಷ್ಯರ ಜೀವ ಉಳಿಸಿದರೆ, ಶಿಕ್ಷಕರು ವ್ಯಕ್ತಿಯ ಜೀವನ ರೂಪಿಸುತ್ತಾರೆ ಇವರು ಕರ್ತವ್ಯ ಮರೆತರೆ ಸಮಾಜ ತಪ್ಪು ದಾರಿ ಹಿಡಿಯುತ್ತದೆ. ಗುರು-ಶಿಷ್ಯರ ಪರಂಪರೆ, ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಕರು ರಾಜಕಾರಣ ಮಾಡದಿರಿ: ಶಿಕ್ಷಕರು ರಾಜಕೀಯ ಮಾಡಿಕೊಂಡು ಓಡಾಡಬಾರದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ 9ನೇ ಸ್ಥಾನ ಒಳಗೆ ಬರಲು ಶ್ರಮವಹಿಸಬೇಕು ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ರಾಜಸಾಬ್ ನಂದಾಪುರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕ್ಷೇತ್ರ ಶಿಕ್ಷಣ ಸುಧಾರಣೆ ಸಮಿತಿ ಅಧ್ಯಕ್ಷ ಶರಣಯ್ಯ ಸ್ವಾಮಿ, ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗಂ ಇತರರಿದ್ದರು.