ಸಂಘಟಿತರಾಗಿ ಹೋರಾಟ ಮಾಡಿದರೆ ಜಯ

Darji
ಹೊಳೆನರಸೀಪುರ ತಾಲೂಕು ಟೈಲರ್ ಅಸೋಷಿಯೇಷನ್ ವತಿಯಿಂದ ಭಾನುವಾರ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಮಾಹಾಸಭೆಯಲ್ಲಿ ಸಂಘದ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು. ತಾಲೂಕು ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧ್ಯಕ್ಷ ವೆಂಕಟೇಶ್, ಕೃಷ್ಣಪ್ಪ, ನಾಗೇಂದ್ರ, ಶಾಕೀರಾ, ಕಮಲಮ್ಮ, ರಾಜೇಶ್ವರಿ, ಜ್ಯೋತಿ, ನಾರಾಯಣ ಇದ್ದರು.
Published on

ಹೊಳೆನರಸೀಪುರ: ಟೈಲರ್‌ಗಳು ಸಂಘಟಿತರಾಗಿ ನಿರಂತರವಾಗಿ ಹೋರಾಟ ಮಾಡಿದಾಗ ಮಾತ್ರ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಸಲು ಸಾಧ್ಯ ಎಂದು ತಾಲೂಕು ಟೈಲರ್ ಅಸೋಷಿಯೇಷನ್ ಅಧ್ಯಕ್ಷ ರೇವಣ್ಣ ತಿಳಿಸಿದರು.

ಹೊಳೆನರಸೀಪುರದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಟೈಲರ್‌ಗಳು ಇದ್ದಾರೆ. ಇವರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಸಾಮಾನ್ಯ ವಿಮೆಗೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆ ಕಾರ್ಡ್‌ಗಳನ್ನು ನೀಡಿದೆ. ಇದಕ್ಕೆ ಸ್ಥಳೀಯವಾಗಿ 100ಕ್ಕೂ ಹೆಚ್ಚು ಟೈಲರ್‌ಗಳಿಗೆ ಕರ್ನಾಟಕ ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದೇವೆ. ಇನ್ನು ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಲು ಎಲ್ಲರೂ ಒಗ್ಗಟಾಗಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, ನಮ್ಮ ಸಂಘದ ಕೆಲವು ಸದಸ್ಯರು ಬ್ಯಾಂಕ್ ನೀಡುವ ಟೈಲರ್ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿದ್ದರೂ ವೃತ್ತಿ ಮುಂದುವರಿಸಲು ಸಾಲ ನೀಡಿರಲಿಲ್ಲ. ಆಗ ಜಿಲ್ಲಾ ಸಂಘ ಬ್ಯಾಂಕಿನ ಅಧಿಕಾರಿಗಳ ಜತೆಯಲ್ಲಿ ಮಾತನಾಡಿ ತರಬೇತಿ ಪಡೆದವರಿಗೆ ಸಾಲ ಕೊಡಿಸಿತು ಎಂದರು.

ಅರಕಲಗೂಡು ಸಂಘದ ಅಧ್ಯಕ್ಷ ಕೃಷ್ಣಪ್ಪ, ಹಾಸನ ಕ್ಷೇತ್ರ ಸಂಘದ ನಾಗೇಂದ್ರ, ಬೇಲೂರಿನ ಆರಿಫ್, ಅರೇಹಳ್ಳಿ ಸಂತೋಷ್, ತಾಲೂಕು ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು.

ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಸದಸ್ಯರನ್ನು ಸನ್ಮಾನಿಸಿದರು. ವೃತ್ತಿಯಲ್ಲಿದ್ದು ನಿಧನರಾದ 6 ಟೈಲರ್‌ಗಳ ಕುಟುಂಬಕ್ಕೆ ಹಣ ಸಹಾಯ ಒದಗಿಸಿದರು. ತಾಲೂಕು ಸಂಘದ ಉಪಾಧ್ಯಕ್ಷ ಸುರೇಶ್, ನಾರಾಯಣ, ಶಾಕೀರ, ರಾಜೇಶ್ವರಿ, ಕಮಲಮ್ಮ, ಜ್ಯೋತಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net