ಶೋಭಾಗೆ ಟಿಕೆಟ್ ಕೊಟ್ರೆ ನಾವೇ ಸೋಲಿಸ್ತೀವಿ!

10 ckm 1
ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ನಿರ್ವಹಣಾ ಸಭೆ ನಡೆಸಲು ಆಗಮಿಸಿದ್ದ ಚುನಾವಣಾ ಪ್ರಭಾರಿ ಆರಗ ಜ್ಞಾನೇಂದ್ರ ಹಾಗೂ ಕ್ಷೇತ್ರ ಪ್ರಭಾರಿ ಎಂ.ಬಿ.ಭಾನುಪ್ರಕಾಶ್ ಎದುರು ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ ಬಿಜೆಪಿ ಕಾರ್ಯಕರ್ತರು.
Published on

ಚಿಕ್ಕಮಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ದಿನೇದಿನೆ ಹೆಚ್ಚಾಗಲಾರಂಭಿಸಿದೆ. ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆಯಬೇಕಾಗಿದ್ದ ಚುನಾವಣಾ ನಿರ್ವಹಣಾ ಸಭೆ ವೇಳೆಯೇ ಪಕ್ಷದ ಕಾರ್ಯಕರ್ತರು ಪ್ರಭಾರಿಗಳ ಎದುರೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹೌದು… ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹೈಡ್ರಾಮಾವೇ ನಡೆದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣೆ ಸಭೆ ನಡೆಸಲು ಕ್ಷೇತ್ರ ಪ್ರಭಾರಿ ಎಂ.ಬಿ.ಭಾನುಪ್ರಕಾಶ್ ಹಾಗೂ ಚುನಾವಣಾ ಪ್ರಭಾರಿ ಆರಗ ಜ್ಞಾನೇಂದ್ರ ಆಗಮಿಸಿ ಇನ್ನೇನು ಸಭೆ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ ನೂರಾರು ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಅಲ್ಲದೆ ಈ ಬಾರಿ ಯಾವ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.
ಸಭೆ ನಡೆಯಬೇಕಿದ್ದ ಸಭಾಂಗಣದ ಎದುರೇ ಪ್ರತಿಭಟನೆ ಕುಳಿತ ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಶೋಭಾ ಕರಂದ್ಲಾಜೆ ಅವರೇ ನೇರ ಕಾರಣ. ಹೀಗಾಗಿ ಯಾವ ಕಾರಣಕ್ಕೂ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು.
ಎರಡು ಬಾರಿ ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಜತೆಗೆ ಪಕ್ಷ ಸಂಘಟನೆಗೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಕಾರ್ಯಕರ್ತರನ್ನೇ ಹತ್ತಿರಕ್ಕೆ ಸೇರಿಸುತ್ತಿಲ್ಲ, ಹೀಗಿರುವಾಗ ಕ್ಷೇತ್ರದ ಅಭಿವೃದ್ಧಿ ಹೇಗಾಗುತ್ತದೆ. ಚುನಾವಣೆ ಮುಗಿದ ಮೇಲೆ ಪಕ್ಷದ ಕಾರ್ಯಕರ್ತರೇ ಬೇಡ ಎನ್ನುವ ಮನಸ್ಥಿತಿ ಶೋಭಾ ಅವರಿಗಿದೆ. ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ್ದೇ ಆದಲ್ಲಿ ನಾವುಗಳೇ ಮುಂದೆ ನಿಂತು ಅವರನ್ನು ಸೋಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶೋಭಾ ಕರಂದ್ಲಾಜೆ ವಿರುದ್ಧವಾಗಿ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಚುನಾವಣಾ ನಿರ್ವಹಣಾ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಆರಗ ಜ್ಞಾನೇಂದ್ರ ಹಾಗೂ ಎಂ.ಬಿ.ಭಾನುಪ್ರಕಾಶ್ ಸಭಾಂಗಣದಿಂದ ಹೊರನಡೆದರು. ಬಳಿಕ ಪಕ್ಷದ ಮುಖಂಡರ ಜತೆ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು.

ಯಡಿಯೂರಪ್ಪ ಅವರೇ ಗೆಲ್ಲಿಸಿಕೊಳ್ಳಲಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧವಾಗಿ ಗೋಬ್ಯಾಕ್ ಅಭಿಯಾನ ಆರಂಭಗೊಂಡ ಬೆನ್ನಲ್ಲೇ ಚಿಕ್ಕಮಗಳೂರಿಗೆ ಆಗಮಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿಯೂ ಶೋಭಾ ಕರಂದ್ಲಾಜೆಗೆ ಟಿಕೆಟ್ ಫಿಕ್ಸ್ ಎಂದು ಹೇಳಿದ್ದರ ವಿರುದ್ಧವಾಗಿಯೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶೋಭಾ ಕರಂದ್ಲಾಜೆ ವಿರುದ್ಧವಾಗಿ ಗೋಬ್ಯಾಕ್ ಅಭಿಯಾನ ಹಾಗೂ ಪತ್ರ ಚಳವಳಿ ನಡೆಸಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಯಡಿಯೂರಪ್ಪ, ಇದೆಲ್ಲವನ್ನೂ ಮಾಡಿಸುತ್ತಿರುವುದು ಯಾರು ಎನ್ನುವುದು ನನಗೆ ಗೊತ್ತಿದೆ. ಈ ಬಾರಿಯೂ ಶೋಭಾ ಕರಂದ್ಲಾಜೆಗೆ ಟಿಕೆಟ್ ಫಿಕ್ಸ್ ಎಂದು ಘೋಷಣೆ ಮಾಡಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೂ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು, ಎಲ್ಲೆಂದರಲ್ಲಿ ಟಿಕೆಟ್ ಘೋಷಣೆ ಮಾಡಲು ಯಡಿಯೂರಪ್ಪ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಘೋಷಣೆ ಮಾಡಿದಂತೆ ಶೋಭಾಗೆ ಟಿಕೆಟ್ ಸಿಕ್ಕಲ್ಲಿ ನಾವು ಯಾರೂ ಕೆಲಸ ಮಾಡುವುದಿಲ್ಲ. ಅವರೇ ಬಂದು ಗೆಲ್ಲಿಸಿಕೊಳ್ಳಲಿ ಎಂದು ಸವಾಲೆಸೆದರು.

ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮೆಲ್ಲರ ಗುರಿ. ಪ್ರತಿಭಟನೆ ಮಾಡಬಾರದೆಂದು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ನಮ್ಮ ಅಭ್ಯರ್ಥಿ ಮೋದಿ ಅವರೇ ಎಂದು ಭಾವಿಸಿ ಕೆಲಸ ಮಾಡಬೇಕು. ನಮ್ಮಲ್ಲಿನ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು. ಪಕ್ಷದ ವಿರುದ್ಧ ಕೆಲಸ ಮಾಡಿದ ಕರ್ಮವನ್ನು ಅವರೇ ಅನುಭವಿಸುತ್ತಾರೆ. ಹೀಗಾಗಿ ಬಿಜೆಪಿ ಗೆಲ್ಲಿಸಲು ನಾವೆಲ್ಲರೂ ಸೇರಿ ಕೆಲಸ ಮಾಡೋಣ.ಸಿ.ಟಿ.ರವಿ, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net