

ಗೋಕರ್ಣ: ಮನೆ ಮತ್ತು ದೇಶವನ್ನು ಬೆಳಗುವ ನಿಜವಾದ ದೀಪ ವಿದ್ಯೆಯಾಗಿದೆ. ವಿದ್ಯೆಯ ದೀಪ ಆರಿದರೆ ದೇಶ ಕತ್ತಲುಮಯ. ಕಾರಣ ವಿದ್ಯಾದೀಪಗಳ ಅನಾವರಣ ಎಲ್ಲಡೆಯಾಗುವಂತಾಗಲಿ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯಲ್ಲಿನ 31ನೇ ಚಾತುರ್ಮಾಸ್ಯದ ಎರಡನೇ ದಿನ ಶ್ರೀಪರಿವಾರದವರ ಗುರುಭಿಕ್ಷಾಸೇವೆಯಲ್ಲಿ ಮಠದ 35ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಶ್ರೀರಾಘವೇಂದ್ರ ಭಾರತೀ ಗುರುವರ್ಯರ ಖಾಸಗಿ ಗ್ರಂಥ ಭಂಡಾರಗಳ ಅನಾವರಣದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರಾಘವೇಂದ್ರ ಭಾರತೀ ಸ್ವಾಮೀಜಿಗಳು ಅಮೋಘವಾದ ವಿದ್ಯಾ ಸಂಪನ್ನತೆಯುಳ್ಳವರಾಗಿದ್ದರು. ವಿದ್ಯಾ ಸಂಪನ್ನತೆಯ ಸಂರಕ್ಷಣೆಯ ಉದ್ದೇಶದಿಂದ ವಿರಾಟ್ ವಿಶ್ವವಿದ್ಯಾಪೀಠದ ಸ್ಥಾಪನೆಯಾಗಿದೆ. ವೇದ, ವ್ಯಾಕರಣ, ತರ್ಕ, ಆಯುರ್ವೇದಾದಿ ಸನಾತನ ಭಾರತೀಯ ವಿದ್ಯೆಗಳು ಬದುಕಿಗೆ ದಾರಿದೀಪವಾಗಿವೆ ಎಂದರು.
ಎಲ್ಲರೂ, ಎಲ್ಲವೂ ನಿಮಿತ್ತ ಮಾತ್ರ. ಕಾಲ ಎಲ್ಲವನ್ನೂ ಮಾಡಿಸುತ್ತದೆ. ತಿಥಿ, ವಾರ, ಮಾಸಗಳೆಲ್ಲವೂ ಕಾಲದ ನಿರ್ಮಿತಿ. ಕಾಲ ಎಲ್ಲ ದಿಕ್ಕುಗಳಿಂದ ಪ್ರವಾಹದೋಪಾದಿಯಲ್ಲಿ ನುಗ್ಗಬಲ್ಲದು. ಎಂತೆಂತಹ ಬಲಿಷ್ಠ, ಧನಿಷ್ಠ ನೃಪರುಗಳನ್ನು ಚಕ್ರದಂತೆ ಪರಿವರ್ತನೆಗೊಳ್ಳುವ ಕಾಲ ಮಣ್ಣಾಗಿಸಿದೆ ಎಂದು ಯುದ್ಧ ಮತ್ತು ಅದು ಮಾಡಿದ ವಿನಾಶದಿಂದ ವ್ಯಥಿತನಾದ ಧರ್ಮರಾಯನಿಗೆ ವ್ಯಾಸ ಮಹರ್ಷಿಗಳು ಬಗೆ ಬಗೆಯಿಂದ ತಿಳಿಸಿ ಯುದ್ಧಾದಿ ಸರ್ವ ದುರ್ದೆಸೆಗೂ ಕಾಲವೇ ಕಾರಣ. ನೀನು ನಿಮಿತ್ತ ಮಾತ್ರ ಎಂದು ದುಃಖ ಶಮನ ಮಾಡಿದ್ದಾರೆ ಎಂಬುದಾಗಿ ಕಾಲದ ಮಹತಿಯನ್ನು ವಿವರಿಸಿದರು.
ಅನಿಯಮಿತವಾಗಿ, ಅನವರತ ಸೇವೆಯಲ್ಲಿರುವ ಶ್ರೀಪರಿವಾರವನ್ನು ಗುರುತಿಸುವ ಮಹತ್ಕಾರ್ಯವಾಗಬೇಕು ಎಂದರು. ವಿಶ್ವವಿದ್ಯಾಪೀಠದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮ ಗ್ರಂಥಗಳ ಅನಾವರಣ ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕೋಶಾಧ್ಯಕ್ಷ ಸುಧಾಕರ, ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮ, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಜೆ.ಎಲ್. ಗಣೇಶ ಮತ್ತಿರರಿದ್ದರು.