

ಕಿಕ್ಕೇರಿ: ಗಾಂಧೀಜಿಯ ಕನಸು ನನಸಾಗಿಸಲು ಸತ್ಯ, ಅಹಿಂಸೆ ಮಾರ್ಗದಲ್ಲಿ ಎಲ್ಲರೂ ನಡೆಯಲು ಮುಂದಾದರೆ ಠಾಣೆಯಲ್ಲಿನ ಪ್ರಕರಣಗಳೇ ದೂರವಾಗಲಿವೆ ಎಂದು ಪ್ರಾಂಶುಪಾಲ ಎಂ.ಆರ್.ಸಹದೇವು ಹೇಳಿದರು.
ಇಲ್ಲಿನ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಎಳೆಯರಿಂದ ಎಲ್ಲರೂ ಆದರ್ಶವಾಗಿ ರೂಪಿಸಿಕೊಳ್ಳಬೇಕಿದೆ. ಪ್ರೀತಿ, ಪ್ರೇಮ, ಕರ್ತವ್ಯ ನಿಷ್ಠೆಯಿಂದ ಎಲ್ಲವನ್ನು ಜಯಿಸಬಹುದು ಎಂದು ತೋರಿಸಿಕೊಟ್ಟ ಇಂತಹ ಮಹಾತ್ಮರ ಗುಣಗಾನ ನಿತ್ಯ ಮಾಡಬೇಕಿದೆ. ಟಿವಿ, ಮೊಬೈಲ್‌ನಿಂದ ದೂರವಿದ್ದು, ಮೌನದಲ್ಲಿ ಎಲ್ಲವನ್ನು ಉತ್ತರ ಕಂಡು ಜಯಶೀಲರಾದ ಸತ್ಯದ ಮಾರ್ಗವನ್ನು ಕಾಣಬೇಕು ಎಂದರು.
ಲಾಲ್‌ಬಹಾದ್ದೂರ್ ಶಾಸ್ತ್ರಿ, ಗಾಂಧೀಜಿ ಅವರ ಜನ್ಮ ದಿನ ನಾಡಿಗೆ ಪವಿತ್ರ ದಿನವಾಗಿದೆ. ಬಡತನದಲ್ಲಿ ನಲುಗುತ್ತಿದ್ದ ದೇಶವನ್ನು ಕೃಷಿ ಸಾಮ್ರಾಜ್ಯವಾಗಿಸಲು, ಚೀನಾ ಆಕ್ರಮಣಕ್ಕೆ ತಕ್ಕ ಪಾಠ ಕಲಿಸಲು ಯುದ್ಧಕ್ಕೆ ಸಜ್ಜ್ಜಾದ ಶಾಸ್ತ್ರೀಜಿಯವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಐಷಾರಾಮಿ ಬದುಕು ಬಯಸದೆ ಸರಳತೆಯೇ ಉಸಿರಾಗಿಸಿಕೊಂಡ ಇವರ ತತ್ವ ಸಿದ್ಧಾಂತ ಯುವಜನತೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಉಪನ್ಯಾಸಕರಾದ ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಅರ್ಪಿತಾ, ಚಂದ್ರಿಕಾ, ಲಾವಣ್ಯಾ, ಫಾಜಿಲಾ ಖಾನಂ ಇದ್ದರು.