

ಪಿರಿಯಾಪಟ್ಟಣ: ಕಲಿಕೆ ಎಂಬುದು ಪತ್ರಿಯೊಬ್ಬ ವ್ಯಕ್ತಿಯ ಗಳಿಕೆಯ ಸಾಧನವಾಗಿದೆ ಎಂದು ಉಪನ್ಯಾಸಕ ನಾಗರಾಜ್ ಬಿಜಗನಳ್ಳಿ ತಿಳಿಸಿದರು.
ಪಟ್ಟಣದ ಎನ್.ಗೌಡ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ವಿವೇಕಾನಂದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರತಿನಿತ್ಯ ಪರಿಶ್ರಮದಿಂದ ಕಲಿಯುವ ಅಭ್ಯಾಸ ಮಾಡಬೇಕು. ತಮ್ಮ ದಿನಚರಿಯನ್ನು ಉತ್ತಮ ವಿಷಯಗಳ ಮೂಲಕ ಪ್ರಾರಂಭಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಲಿಯುವ ಸಮಯವನ್ನು ವ್ಯರ್ಥ ಮಾಡಿದರೆ ಗಳಿಸುವ ಸಮಯದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲಿಯೂ ನಾಯಕತ್ವದ ಗುಣವಿರುತ್ತದೆ. ಇದನ್ನು ಉತ್ತಮ ಸಮಾಜ ಕಟ್ಟಲು ಬಳಸಿಕೊಳ್ಳಬೇಕು. ಅವಮಾನಗಳು ಜೀವನದ ಪಾಠ ಕಲಿಸುತ್ತದೆ. ಇಂತಹ ಸಮಯವನ್ನು ಅಭಿವೃದ್ಧಿಗೆ ಬಳಸಿಕೊಂಡರೆ ನಿಮ್ಮ ಜೀವನ ಅಭಿವೃದ್ಧಿಯಾಗುತ್ತದೆ ಎಂದರು. ಕಲಿಕೆಯ ಸಮಯವನ್ನು ಪ್ರಗತಿಯತ್ತ ಸಾಗಲು ಉಪಯೋಗಿಸಬೇಕು. ಜತೆಗೆ ತಮ್ಮ ಮನಸ್ಸಿನಲ್ಲಿರುವ ಪ್ರತಿಭೆ ಬೆಳೆಸುವ ನಿರ್ಧಾರ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊಡಗು ವಿವಿ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಮಾತನಾಡಿ, ಶಿಕ್ಷಣವು ವ್ಯಕ್ತಿತ್ವ ಮತ್ತು ಸಬಲೀಕರಣದ ಅಸ್ತ್ರ ಎಂದು ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ್ದಾರೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಕಾಲೇಜಿನ ವಯಸ್ಸಿನಲ್ಲಿ ಚಂಚಲ ಮನಸ್ಸಿರುತ್ತದೆ. ಇದನ್ನು ನಿಯಂತ್ರಿಸಿ ಶಿಕ್ಷಣದ ಕಡೆ ಹೆಚ್ಚಿನ ಗಮಹರಿಸಬೇಕು. ಈ ಮೂಲಕ ಬೌದ್ಧಿಕತೆ ಹೆಚ್ಚುತ್ತದೆ ಎಂದರು.
ಪಾಲಕರು ಸಹ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿ ಪೋಷಣೆ ಮಾಡಬೇಕು. ಮಕ್ಕಳು ಕೂಡ ಶಿಕ್ಷಕರು ಮತ್ತು ಪಾಲಕರ ಗೌರವ ಕಾಪಾಡುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಟ್ಟನೆ ಹೆಬ್ಬಾಗಿಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ ಮಾತನಾಡಿದರು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್.ಎಲ್.ರವಿ, ಮುಖ್ಯಶಿಕ್ಷಕ ತಿಪ್ಪೆರುದ್ರಸ್ವಾಮಿ, ಉಪನ್ಯಾಸಕರಾದ ನಂಜುಂಡ ಸ್ವಾಮಿ, ಶ್ರೀನಿವಾಸ್, ವೆಂಕಟೇಶ್, ರಾಜ, ಶೃತಿ, ಚೆನ್ನಾಂಬಿಕ, ಧನಂಜಯ, ಸಂದೇಶ್, ನವೀನ್ ಇತರರು ಇದ್ದರು.