ಸಮಸ್ಯೆಗೆ ಸ್ಪಂದಿಸದಿದ್ದರೆ ಬೇರೆಡೆ ಹೋಗಲಿ

Hebbar meeting
Published on

ಯಲ್ಲಾಪುರ: ಅಧಿಕಾರಿಗಳು ವರ್ಗಾವಣೆಯಾದಾಗ ಅವರ ಸ್ಥಾನಕ್ಕೆ ಬೇರೆ ಅಧಿಕಾರಿಗಳು ಬಂದ ನಂತರವೇ ಆ ಸ್ಥಾನದಿಂದ ಬಿಡುಗಡೆಯಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಸಾಮಾನ್ಯರು, ಜನಪ್ರತಿನಿಧಿಗಳು ಸಾರ್ವಜನಿಕ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ಗೌರವಯುತವಾಗಿ ಸ್ಪಂದಿಸಬೇಕು. ಇಲ್ಲವಾದರೆ ತಮ್ಮ ಸ್ಥಾನ ಬಿಟ್ಟು ಹೋಗಬೇಕು ಎಂದರು.

ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ ಮಾತನಾಡಿ, ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮಾತ್ರ ರೈತರಿಗೆ ಬೆಳೆ ವಿಮೆ ಬಂದಿದೆ. ಬೇರೆ ಯಾವ ಪಂಚಾಯಿತಿಯಲ್ಲೂ ಬೆಳೆ ವಿಮೆ ಬಂದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಾರಿ ಜಿಲ್ಲೆಗೆ 82.50 ಲಕ್ಷ ರೂ ವಿಮೆ ಬರಬೇಕಿತ್ತು. ಆದರೆ ಬಂದದ್ದು 12 ಲಕ್ಷ ರೂ ಮಾತ್ರ. ರೈತರು ಕಟ್ಟಿದ ಹಣ 12 ಕೋಟಿ ರೂ. ದಾಟಿದೆ. ರೈತರಿಗೆ ವಿಮೆ ನೀಡಬೇಕಾದ ಕಂಪನಿ, ಇಲ್ಲದ ಸಬೂಬು ಹೇಳುತ್ತ, ರೈತರಿಗೆ 70 ಕೋಟಿ ರೂ ಮೋಸ ಮಾಡಿದೆ. ಕೇಂದ್ರ ಸರ್ಕಾರವೇ ಸೂಚನೆ ನೀಡಿದರೂ, ವಿಮಾ ಕಂಪನಿ ಕ್ರಮಕ್ಕೆ ಮುಂದಾಗಿಲ್ಲ. ಕೇಂದ್ರ ನೀಡಿದ ಅವಧಿಯೊಳಗೆ ವಿಮೆ ಜಮಾ ಆಗದೇ ಹೋದರೆ, ಆ ಕಂಪನಿಗೆ ವಿಮೆ ನೀಡುವ ಟೆಂಡರನ್ನು ರದ್ದುಗೊಳಿಸಬೇಕು. ಕಂಪನಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದೊಂದೇ ರೈತರಿಗೆ ನ್ಯಾಯ ಒದಗಿಸಲು ನಮಗಿರುವ ದಾರಿ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ಕಿರವತ್ತಿಯಲ್ಲಿ 4 ಗುಂಟೆ ಜಾಗ ಸಿಕ್ಕಿದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಆರಂಭಿಸಲಾಗುವುದೆಂದರು.

ಸ್ಪಂದಿಸಿದ ಶಾಸಕರು, ತಾಪಂಗೆ ಸೇರಿದ 4 ಗುಂಟೆ ಜಾಗವನ್ನು ಆರೋಗ್ಯ ಇಲಾಖೆಗೆ ನೀಡುವ ಕುರಿತು ಠರಾವು ಸ್ವೀಕರಿಸಿದರು.

ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾಹಿತಿ ನೀಡಿ, ಈ ಬಾರಿ ಮಳೆ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದ ಬೆಳೆಹಾನಿಯ ಪ್ರಮಾಣ ಹೆಚ್ಚಿದೆ. ಬೆಳೆಹಾನಿಯಿಂದ ಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ತಂದಿರುವ ಬದಲಾವಣೆಗಳಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಚಂದಗುಳಿ ಗ್ರಾ.ಪಂ ಸದಸ್ಯ ಆರ್.ಎಸ್. ಭಟ್ಟ ಶಾಸಕರ ಗಮನಕ್ಕೆ ತಂದರು.

ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ತಾ.ಪಂ ಆಡಳಿತಾಧಿಕಾರಿ ನಟರಾಜ.ಟಿ.ಎಚ್., ಇಒ ರಾಜೇಶ ಧನವಾಡಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net