

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಧಮ್ಮು ಹಾಗೂ ತಾಕತ್ತು ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ನೋಡೋಣ… ಅವರಿಗೆ ಅಲ್ಲೇ ಸರಿಯಾದ ಉತ್ತರ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ನಾಯಕರಿಗೆ ಬಹಿರಂಗವಾಗಿ ಪಂಥಾಹ್ವಾನ ನೀಡಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂನಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಸುಳ್ಳೇ ಅವರ ಮನೆದೇವರು. ಹಾಗಾಗಿಯೇ ಬರಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸರ್ಕಾರ ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುತ್ತದೆ ಎಂದು ಆರೋಪ ಮಾಡುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲೇ ಎಂದು ಪ್ರಶ್ನಿಸಿದ ಅವರು, ಬಡವರು ಇರುವವರೆಗೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದು ಈ ಯೋಜನೆ ನಿಲ್ಲಿಸೋಣ ಎಂದು ಕೊಂಡಿರಬಹುದು. ಆದರೆ ಜೀವಮಾನದಲ್ಲಿ ಅವರು ಇನ್ನೆಂದೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಬಸವಾದಿ ಶರಣರೇ ಪ್ರೇರಣೆ. ಇದಕ್ಕಾಗಿಯೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರು ಏಕೆ ಈ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನಮ್ಮ ಮೇಲೆ ಮಾಡುವ ಆರೋಪಗಳು ಸತ್ಯಕ್ಕೆ ಹತ್ತಿರವಾಗಿದ್ದರೆ ಅವುಗಳನ್ನು ನಾವು ಸ್ವಾಗತಿಸಬಹುದು. ಆದರೆ ಬರೀ ಸುಳ್ಳನ್ನು ಹೇಳಿಕೊಂಡಿ ಓಡಾಡುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಗೊತ್ತಿದೆ. ಹೀಗಿದ್ದರೂ ಸುಳ್ಳು ಹೇಳಿ ಜನರಿಗೆ ದ್ರೋಹ ಮಾಡುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿವೆ. ಜನ ಇದನ್ನು ಅರ್ಥ ಮಾಡಿಕೊಂಡು ಎರಡೂ ಪಕ್ಷಗಳಿಗೂ ತಕ್ಕಪಾಠ ಕಲಿಸಬೇಕು ಎಂದು ಕರೆನೀಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗಿನ ಭ್ರಷ್ಟಾಚಾರ, ಜನವಿರೋಧಿ ಯೋಜನೆಗಳು, ನುಡಿದಂತೆ ನಡೆಯದಿದ್ದರಿಂದಲೇ ಕಳೆದ ಚುನಾವಣೆಯಲ್ಲಿ ಜನ ಅವರಿಗೆ ತಕ್ಕಪಾಠ ಕಲಿಸಿದ್ದಾರೆ. ಆದರೂ ಬಿಜೆಪಿಗರಿಗೆ ಇನ್ನೂ ಬುದ್ಧಿ ಬಂದಿಲ್ಲ. ಸುಳ್ಳಿನ ಮೂಲಕವೇ ರಾಜ್ಯವನ್ನು ಆಳಲು ಮತ್ತೆ ಮತ್ತೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಇಂದು ಚಿಕ್ಕಮಗಳೂರಿಗೆ ಜನರಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಬದಲಿಗೆ ಜನರ ಋಣ ತೀರಿಸಲು ಬಂದಿದ್ದೇವೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಜನರು ನಮ್ಮನ್ನು ನಂಬಿ ಅಧಿಕಾರ ಕೊಟ್ಟಿದ್ದಾರೆ. ಜನರ ನಂಬಿಕೆಗೆ ಮೋಸವಾಗದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೇ ಕರೆ ಮಾಡಿ ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಬರುವ ಭಕ್ತರ ನಾಲ್ಕು ಪಟ್ಟು ಹೆಚ್ಚಾಗಿದೆ. ನಮಗೆ ಉಚಿತವಾಗಿ ಪ್ರಸಾದ ನೀಡುವುದು ಕಷ್ಟವೇನೂ ಆಗುತ್ತಿಲ್ಲ. ಹುಂಡಿಯೂ ತುಂಬುತ್ತಿದೆ. ಜತೆಗೆ ಸಿಎಂ ಹೆಸರಿನಲ್ಲಿ ಅರ್ಚನೆ ಮಾಡಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು. ಇದನ್ನೆಲ್ಲಾ ನೋಡಿದಾಗ ಜನರ ಪ್ರೀತಿ ಕಂಡು ಹೆಮ್ಮೆಯಾಗುತ್ತಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ, ನಯನಾ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಮತ್ತಿತರರಿದ್ದರು.