ರಸಗೊಬ್ಬರ ಅಭಾವ ಸೃಷ್ಟಿಸಿದ್ರೆ ಲೈಸನ್ಸ್ ರದ್ದು; ಜಿಲ್ಲಾಧಿಕಾರಿ ಎಚ್ಚರಿಕೆ

FotoJet
Published on

ಕೋಲಾರ: ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಮಾರಾಟಗಾರರು ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಠಿಸಿದರೆ ತಕ್ಷಣ ಲೈಸನ್ಸ್ ರದ್ದುಪಡಿಸಿ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕೃಷಿ ಪರಿಕರ, ಬೀಜ, ರಸಗೊಬ್ಬರ ಮಾರಾಟಗಾರರನ್ನೊಳಗೊಂಡ ಜಿಲ್ಲಾಮಟ್ಟದ ರಸಗೊಬ್ಬರ ನಿರ್ವಹಣೆ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ತೊಂದರೆಯಾಗದಂತೆ ಸುಮಾರು 448ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಸಗೊಬ್ಬರ ವಿತರಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.

ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ನೀಡಲು ಅನಗತ್ಯ ಷರತ್ತು ವಿಧಿಸುವುದು, ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಠಿಸುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್ ರದ್ದುಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳಲ್ಲಿ ರಾಗಿ 430.8 ಕ್ವಿಂಟಲ್, ತೊಗರಿ 38.6 ಕ್ವಿಂ, ಅಲಸಂದೆ 32 ಕ್ವಿಂ, ನೆಲೆಗಡೆಲೆ 386.6 ಕ್ವಿಂ, ಒಟ್ಟು 888 ಕ್ವಿಂ, ದವಸಧಾನ್ಯಗಳ ದಾಸ್ತಾನು ಲಭ್ಯವಿದೆ. ಹಾಗೆಯೇ ಒಟ್ಟು 13933 ಮೆಟ್ರಿಕ್ ಟನ್‌ಗಳಷ್ಟು ವಿವಿಧ ರಸಗೊಬ್ಬರಗಳು ದಾಸ್ತಾನು ಮಾಡಲಾಗಿದೆ ಎಂದು ಅಕ್ರಂಪಾಷಾ ತಿಳಿಸಿದರು. ಕೃಷಿ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಉಪ ನಿರ್ದೇಶಕ ಕುಮಾರಸ್ವಾಮಿ, ಕೃಷಿ ಉಪ ನಿರ್ದೇಶಕಿ ಭವ್ಯರಾಣಿ, ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಇದ್ದರು.

ಕೋಲಾರದಲ್ಲಿ 39,000 ಹೆಕ್ಟೇರ್ ಮಾವು ಬೆಳೆ ಹಾನಿ
ಪ್ರಸಕ್ತ ಸಾಲಿನಲ್ಲಿ ಬರ ಪರಿಹಾರವಾಗಿ 50,500 ರೈತರಿಗೆ 24 ಕೋಟಿ ರೂ. ಪರಿಹಾರವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಅತಿ ಉಷ್ಣತೆಯಿಂದಾಗಿ ಜಿಲ್ಲೆಯಲ್ಲಿ 39,000 ಹೆಕ್ಟೇರ್ ಮಾವು ಬೆಳೆ ಹಾನಿಯಾಗಿದ್ದು, 88 ಕೋಟಿ ರೂ. ಪರಿಹಾರ ಧನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ113 ಮಿ.ಮೀ ಮಳೆ
ಕೋಲಾರ ಜಿಲ್ಲೆಯ ಸಾಮಾನ್ಯ ಮಳೆ 108ಮೀ.ಮಿ ಇದ್ದು, ಪ್ರಸಕ್ತ ಸಾಲಿನಲ್ಲಿ 113 ಮೀ.ಮಿ ಸರಾಸರಿ ಮಳೆಯಾಗಿದೆ. ಮೇ ನಲ್ಲಿ ಕೋಲಾರ ಮತ್ತು ಬಂಗಾರಪೇಟೆ ಹೊರತುಪಡಿಸಿ ಸಾಮಾನ್ಯ ಮಳೆಗಿಂತಲ್ಲೂ ಶೇ.5ರಷ್ಟು ಹೆಚ್ಚು ಮಳೆಯಾಗಿದ್ದು, ರೈತರು ಬಿತ್ತನೆ ಪೂರ್ವ ಚಟುವಟಿಕೆಗಳನ್ನು ಹಾಗೂ ಬಿತ್ತನೆ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ ಗೊಬ್ಬರ
ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಸಕಾಲಕ್ಕೆ ದೊರೆಯಬೇಕು ಎಂಬ ಸದ್ದುದೇಶದಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ರಸಗೊಬ್ಬರಗಳ ವಿತರಣೆಯನ್ನು ಮಾಡಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾದ್ಯಾಂತ ಯಾವುದೇ ನಕಲಿ ಕೃಷಿ ಪರಿಕರಗಳ ವಿತರಣೆಯಾಗದಂತೆ ನಿಗಾ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net