

ಮೈಸೂರು: ಜೀವನದಲ್ಲಿ ಯಾವ ಕೆಲಸ ಮಾಡಿದರೂ ಪರಿಪೂರ್ಣತೆ ಇರಬೇಕು ಎಂದು ವಾಯು ಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಜಯ್ ದುಡೇಜಾ ಹೇಳಿದರು. ನಗರದ ವಿಜಯ ವಿಠಲ ವಿದ್ಯಾ ಶಾಲೆಯಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ಯಾವಾಗಲೂ ಜೀವನದಲ್ಲಿ ಖುಷಿಯಿಂದ ಇರಬೇಕು. ನಗುತ್ತಾ ಇರುವುದರ ಜತೆಗೆ ತಮ್ಮ ಸುತ್ತಲಿರುವವರನ್ನು ನಗಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳು ದಿನವೂ ಶಾಲೆಗೆ ಶಿಸ್ತುಬದ್ಧರಾಗಿ ಬರಬೇಕು. ಸೂಕ್ತ ಸಮಯದಲ್ಲಿ ಊಟ, ನಿದ್ರೆ, ಅಧ್ಯಯನದಲ್ಲಿ ತೊಡಗಬೇಕು. ಜೀವನದಲ್ಲಿ ಯಾವಾಗಲೂ ತಲೆ ಎತ್ತಿ ನಡೆಯಬೇಕು. ಏನೇ ಮಾಡಿದರೂ ಶ್ರದ್ಧೆ ಇದ್ದಾಗ ವಿಜಯ ಖಚಿತವಾಗುತ್ತದೆ ಎಂದರು.
ಚಾರಿತ್ರೃದ ಬೆಳವಣಿಗೆ ಮುಖ್ಯ: ವಿಜಯ ವಿಠಲ ವಿದ್ಯಾ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎ.ವಿಶ್ವನಾಥ್ ಮಾತನಾಡಿ, ಶಾಲೆಯಲ್ಲಿ ಕಲಿಯುವ ಸಂಸ್ಕಾರ ಮತ್ತು ವಿಧೇಯತೆ ಜೀವನದಲ್ಲಿ ವ್ಯಕ್ತಿಯನ್ನು ಬೆಳೆಯುವಂತೆ ಮಾಡುತ್ತದೆ ಎಂದರು. ಇಂದಿನ ಶಿಕ್ಷಣದಲ್ಲಿ ಹಲವು ಬದಲಾವಣೆಗಳಾಗುತ್ತಿದೆ. ಆದರೆ ವ್ಯಕ್ತಿಯಲ್ಲಿ ಚಾರಿತ್ರೃದ ಬೆಳವಣಿಗೆ ಮುಖ್ಯ. ತಂದೆ -ತಾಯಿಗೆ ನಮಸ್ಕರಿಸಿ, ಹಿರಿಯರಿಗೆ ಗೌರವಿಸುವ ಗುಣ ಮಕ್ಕಳಲ್ಲಿ ಇರಬೇಕು. ಪಾಲಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಬೇಕು ಎಂದು ತಿಳಿಸಿದರು.
ಎನ್.ಸಿ.ಸಿ ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಬ್ಯಾಂಡ್ ವಿದ್ಯಾರ್ಥಿಗಳ ಪ್ರದರ್ಶನ ಮತ್ತು ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ವಿಜಯ ವಿಠಲ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ವಾಸುದೇವಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಪ್ರಾಂಶುಪಾಲರಾದ ಎಸ್.ಎ.ವೀಣಾ, ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.