

ಶಿವಮೊಗ್ಗ: ಜಾತಿ ಗಣತಿ ವರದಿ ಜಾರಿಗೆ ಪ್ರಬಲ ವಿರೋಧವಿದ್ದರೆ ಅದನ್ನು ಕೈಬಿಡುವುದೇ ಒಳ್ಳೆಯದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಗ್ಗೆ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳೋದಿಷ್ಟೇ. ಪ್ರಬಲ ವಿರೋಧವಿದ್ದರೆ ಖಂಡಿತ ವರದಿ ಕೈ ಬಿಡುವುದೇ ಒಳ್ಳೆಯದು. ಬೇರೆ ಬೇರೆ ವರ್ಗದವರ ವಿರೋಧ ಕಟ್ಟಿಕೊಂಡು ಆಡಳಿತ ಮಾಡುವುದು ಒಳ್ಳೆಯದಲ್ಲ ಎಂದರು.
ಜಾತಿ ಗಣತಿ ಕುರಿತು ಸಚಿವ ಸಂಪುಟ ಸಭೆ ಹಾಗೂ ಎಲ್ಲ ಶಾಸಕರ ಸಭೆ ಕರೆದು ಚರ್ಚೆ ಮಾಡುವುದು ಒಳ್ಳೆಯದು. ಮುಂದಿನ ನಿರ್ಧಾರ ಮಾಡುವ ಬದಲು ಎಲ್ಲರನ್ನು ಕರೆದು ಒಮ್ಮತದ ತೀರ್ಮಾನ ಮಾಡಬೇಕು. ಬಹುತೇಕ ಕಡೆ ಸಮೀಕ್ಷೆ ಸರಿಯಾಗಿ ಆಗಿಲ್ಲ. ಈ ಬಗ್ಗೆ ಹಲವು ಶಾಸಕರು ವಿರೋಧ ಮಾಡಿದ್ದಾರೆ. ಕೆಲವು ಜಾತಿಯವರು ನಮಗೆ ಬೇಡ ಅಂತಿದ್ದಾರೆ. ಎಲ್ಲ ವರ್ಗದ ವಿರೋಧ ಕಟ್ಟಿಕೊಳ್ಳುವುದು ಬೇಡ. ಜಾತಿ ಗಣತಿ ವರದಿಯನ್ನು ಸದ್ಯಕ್ಕೆ ನಿಲ್ಲಿಸುವುದು ಒಳ್ಳೆಯದು. ಆನಂತರ ಪರಿಶೀಲಿಸಿ ಅನುಷ್ಠಾನ ಮಾಡಲಿ ಎಂದು ಸಲಹೆ ನೀಡಿದರು.