

ಬೆಂಗಳೂರು: ಕಾವೇರಿ ನೀರಿನ ಹಂಚಿಕೆ ಮತ್ತು ಕೇಂದ್ರದಿಂರ ರಾಜ್ಯಕ್ಕೆ ಅನುದಾನ ತರುವ ವಿಚಾರದಲ್ಲಿ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸದಿದ್ದರೆ, ಭಗವಂತನೇ ಬಂದರೂ ಸಮಸ್ಯೆ ಬಗೆಹರಿಸಲು ಸಾಧವಿಲ್ಲ. ಕೇಂದ್ರದ ಸಹಕಾರವಿಲ್ಲದೆ, ರಾಜ್ಯದ ಜನರ ತೆರಿಗೆಯಿಂದ ನಿರ್ಮಿಸಿರುವ ಕೆಆರ್‌ಎಸ್, ಹಾರಂಗಿ, ಹೇಮಾವತಿ ಜಲಾಶಯದ ನೀರನ್ನು ತಮಿಳುನಾಡಿಗೆ ಹರಿಸುವ ನೀರಗಂಟಿ ಕೆಲಸ ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಕಾವೇರಿ ನದಿ ರಕ್ಷಣಾ ಸಮಿತಿ ಆಯೋಜಿಸಿದ್ದ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಗೆಲುಲು ಸಾಧಿಸಿದರೆ ಐದೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ಅವರಿಗೆ ಹೇಳಿ ಅನುಮತಿ ಕೊಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಮತ್ತೊಂದೆಡೆ ಡಿಸಿಎಂ ಅವರು ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಇರುವುದು ರಾಜಕೀಯ ಒಪ್ಪಂದವೇ ಹೊರತು, ಮೇಕೆದಾಟು ವಿಚಾರದಲ್ಲಿ ಮಾತನಾಡಲು ಅಲ್ಲವೆಂಬ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಅದು ಹೋಗಲಿ ಬಿಡಿ, ಕಳೆದು ಒಂದು ವರ್ಷದಲ್ಲಿ ರಾಜ್ಯಕ್ಕೆ ಆಗಬೇಕಿರುವ ಕೆಲಸದ ಬಗ್ಗೆ ರಾಜ್ಯದ ಯಾವೊಬ್ವ ಮಂತ್ರಿ ಕೂಡ ನನ್ನ ಬಳಿ ಬಂದು ಚರ್ಚೆ ಮಾಡಿಲ್ಲ. ಅದೇ ನೆರೆಯ ಆಂಧ್ರ ಪ್ರದೇಶದ ಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಿ ಕೇಂದ್ರದಿಂದ ಮೊದಲ ಆದ್ಯತೆಯಲ್ಲಿ ಸೌಲಭ್ಯ ಪಡೆಯವ ಶಕ್ತಿ ಬೆಳೆಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಎಲ್ಲ ಪಕ್ಷಗಳು ನೀರಿಗಾಗಿ ಒಂದಾಗಿ ಹೋರಾಟ ಮಾಡುತ್ತಿವೆ.
ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡಿಕೊಂಡು ಕಿತ್ತಾಡುತ್ತಿದ್ದಾರೆ. ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಬೇಕೆಂದು ಹೇಳುವಂತಹ ವ್ಯಕ್ತಿಗಳೇ ಇಂದಿನ ಆಡಳಿತದಲ್ಲಿ ಜಾತಿಯ ಪ್ರಚೋದನೆ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಮೀರಲು ಸಾಧ್ಯವಿಲ್ಲ. ಮತ್ತೊಂದೆಡೆ ರಾಜಕೀಯ ತೀರ್ಮಾನಗಳು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರದಿದ್ದರೆ, ನಮ್ಮ ಹೋರಾಟ ಸಂಪೂರ್ಣ ವ್ಯರ್ಥವಾಗಲಿದೆ. ಆದ್ದರಿಂದ ರಾಜ್ಯದ ವಿಚಾರದಲ್ಲಿ ಒಗ್ಗಟ್ಟಿನ ದನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ರೈತರಿಗೆ ನೀಡಲು ಆಗಲ್ಲ:
ಮುಂದಿನ 10-15 ವರ್ಷದಲ್ಲಿ ಕೆಆರ್‌ಎಸ್‌ನ ಸಂಪೂರ್ಣ ನೀರನ್ನು ಬೆಂಗಳೂರಿನ ಜನರಿಗೆ ಕುಡಿಯಲು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೆಆರ್‌ಎಸ್ ನೀರನ್ನು ರೈತರಿಗೆ ನೀಡಲು ಕೊಡಲು ಸಾಧ್ಯವಿಲ್ಲದಂತಾಗುತ್ತದೆ. ಆಗ ನಾವು ಎಲ್ಲಿಗೆ ಹೋಗಬೇಕು. ಇದನ್ನೇ ದೇವೇಗೌಡರು ಲೋಕಸಭೆಯಲ್ಲಿ ನಿರಂತರ ಹೋರಾಟ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಂಸದ ಡಾ. ಸಿ.ಎನ್. ಮಂಜುನಾಥ, ಸಮಿತಿ ಅಧ್ಯಕ್ಷ ಎಚ್.ಕೆ. ರಾಮು, ನೀರಾವರಿ ತಜ್ಞ ಎಂ.ಕೆ. ವೆಂಕಟರಾಮು ಸೇರಿ ಹಲವರು ಉಪಸ್ಥಿತರಿದ್ದರು.
ಕಾವೇರಿ ನೀರನ್ನು ಪಡೆಯುವ ವಿಚಾರದಲ್ಲಿ ಕಾನೂನು ಅರಿವು ಪಡೆಯುವುದು ಬಹಳ ಮುಖ್ಯ. ಇಲ್ಲವಾದಲ್ಲಿ ನಮ್ಮ ಹೋರಾಟ ವ್ಯರ್ಥವಾಗಲಿದೆ. ಈ ಹೋರಾಟ ನಿರಂತರವಾಗಿ ನಡೆಸಬೇಕು ಮತ್ತಯ ವೈಯಕ್ತಿಕವಾಗಿ ರಾಜ್ಯದ ಪ್ರತಿಯೊಬ್ಬರೂ ಕೈಜೋಡಿಸಿ ಜನಾಂದೋಲನವಾಗಿ ಪರಿವರ್ತಿಸಬೇಕು. - ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧಿಪತಿ