

ಮುದ್ದೇಬಿಹಾಳ: ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತೆಗೆಸಿರುವ ಘಟನೆಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಗೃಹಮಂತ್ರಿ, ಶಿಕ್ಷಣ ಮಂತ್ರಿಗಳು ಬಹಿರಂಗವಾಗಿ ಹಿಂದುಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಜನಿವಾರ ಧರಿಸುವ 18 ಸಮಾಜಗಳ ಪ್ರತಿನಿಧಿಗಳು, ಬಿಜೆಪಿ ಮುಖಂಡರೊಂದಿಗೆ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಜನಿವಾರಕ್ಕೆ ಧಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹಿಂದುತ್ವದ ಸಂಕೇತವಾಗಿರುವ ಶಿವದಾರ, ಗುಂಡಗಡಗಿ, ಉಡದಾರ, ಮಂಗಳಸೂತ್ರ, ಕಾಲುಂಗುರ ಮುಂತಾದವುಗಳಿಗೂ ಈ ಸರ್ಕಾರ ಸಂಚಕಾರ ತರಬಹುದು. ಹಿಂದುಗಳೆಲ್ಲ ಈಗಲೇ ಎಚ್ಚೆತ್ತುಕೊಂಡು ಪ್ರತಿರೋಧ ತೋರದಿದ್ದರೆ ಈ ಸರ್ಕಾರ ಹಿಂದುತ್ವವನ್ನೇ ನಾಶ ಮಾಡಲು ಹಿಂಜರಿಯುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲ ಇಂಥ ಘಟನೆಗಳು ನಡೆಯುತ್ತವೆ. ಸರ್ಕಾರ ಹಿಂದುಗಳಿಗೆ ಮಾತ್ರ ಅಘೋಷಿತ ನಿಯಮ ಜಾರಿ ಮಾಡಿದಂತಿದೆ. ಹಿಂದುಗಳು ಇತರರ ಆಚಾರ, ವಿಚಾರಗಳಿಗೆ ಅಡ್ಡಿಪಡಿಸುವವರಲ್ಲ. ಜನಿವಾರ ಧರಿಸುವುದು ಹಿಂದು ಸಂಸ್ಕೃತಿಯ ಪ್ರತೀಕ. ಅದೊಂದು ಭೌತಿಕ, ಮಾನಸಿಕ ಪರಿಪೂರ್ಣತೆ, ಜ್ಞಾನ, ಮೌಲ್ಯಗಳ ಸಂಕೇತ. ಅಂಬೇಡ್ಕರ್ ಅವರ ಸಂವಿಧಾನದ 25-28 ವಿಧಿಯಲ್ಲೂ ಇದರ ಮಹತ್ವ ಪ್ರಸ್ತಾಪಿಸಿ ಜನಿವಾರ ಧರಿಸುವುದು ಹಿಂದುಗಳ ಮೂಲಹಕ್ಕು ಎಂದಿದೆ. ಅಂಥ ಪದ್ಧತಿಗೆ ಕೊಡಲಿ ಪೆಟ್ಟು ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಜನಿವಾರ ತೆಗೆಸಿದ ಘಟನೆಯಲ್ಲಿ ಹೋಮ್‌ಗಾರ್ಡ್, ಪ್ರಿನ್ಸಿಪಾಲ್ ವಿರುದ್ಧ ಕ್ರಮ ಆದರೆ ಸಾಲದು. ಪರೀಕ್ಷೆಯ ಉಸ್ತುವಾರಿಗಳಾಗಿರುವ ಜಿಲ್ಲಾಧಿಕಾರಿ ವಿರುದ್ಧವೂ ಕ್ರಮ ಆಗಬೇಕು. ಕಾನೂನಿನ ಗಾಳಿಗಂಧವೇನಾದರೂ ಗೊತ್ತಿದ್ದರೆ ತಪ್ಪಿತಸ್ಥ ಎಲ್ಲರ ಮೇಲೂ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.
ವಿಪ್ರ ಸಮಾಜದ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಮಾತನಾಡಿ, ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅವಮಾನ ಸಹಿಸುವುದು ಸಾಧ್ಯವಿಲ್ಲ. ಈಚೆಗೆ ಸೋರಿಕೆಯಾದ ಸಮೀಕ್ಷೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು ಎಂದು ತೋರಿಸಲಾಗಿದೆ. ಆದರೆ ಅವರಲ್ಲಿನ ಪಂಗಡ ತೋರಿಸಿಲ್ಲ. ಆದರೆ ಹಿಂದುಗಳಲ್ಲಿ ಪಂಗಡ ತೋರಿಸಿ ಅವರ ಸಂಖ್ಯೆ ಕಡಿಮೆ ಎಂದು ತೋರಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಅಂತ್ಯಕಾಲ ಸನ್ನಿಹಿತವಾಗುತ್ತಿರುವ ಸೂಚನೆಯಾಗಿದೆ ಎಂದರು.
ಕ್ಷತ್ರಿಯ ಮರಾಠ ಸಮಾಜದ ಮುಖಂಡ ರಾಜೇಂದ್ರ ಭೋಸಲೆ ಮಾತನಾಡಿ, ಸಿಇಟಿ ಪರೀಕ್ಷೆ ವಿದ್ಯಾರ್ಥಿ ಜೀವನಕ್ಕೆ ಅಗತ್ಯ. ಜನಿವಾರದ ನೆಪದಲ್ಲಿ ವಿದ್ಯಾರ್ಥಿಯೊಬ್ಬನನ್ನು ಪರೀಕ್ಷೆಯಿಂದ ವಂಚಿಸಿದ್ದು ದುರದಷ್ಟಕರ. ಆ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕು. ತಪ್ಪಿತಸ್ಥ ಎಲ್ಲರ ವಿರುದ್ಧ ಕ್ರಮ ಜಾರಿಯಾಗಬೇಕು ಎಂದರು.
ಎಸ್.ಆರ್.ಕುಲಕರ್ಣಿ, ವಾಸು ಶಾಸಿ ಮಾತನಾಡಿದರು. ಪ್ರಭು ಕಡಿ, ಬಾಬುರಾವ ಚವ್ಹಾಣ, ಅರವಿಂದ ಕುಲಕರ್ಣಿ, ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಪುಟ್ಟು ಕುಲಕರ್ಣಿ, ಸುಭಾಷ ಕುಲಕರ್ಣಿ, ನಾರಾಯಣ ದುರ್ವೆ, ಭರತೇಶ ಮಂಕಣಿ, ರಮೇಶ ದೊಡಮನಿ, ಭರತೇಶ ಶೆಟ್ಟಿ, ರಾಜು ಪದಕಿ, ವಾಸು ಸಾಲವಾಡಗಿ, ಹಣಮಂ ನಲವಡೆ, ರಾಜು ಬಳ್ಳೊಳ್ಳಿ, ಆನಂದ ತುಪ್ಪದ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ರಾಘವೇಂದ್ರ ನಲವಡೆ, ಪಿ.ಎಲ್.ಕುಲಕರ್ಣಿ, ಎಲ್.ಎಸ್.ದೇಶಪಾಂಡೆ, ಪ್ರಸನ್ನ ಮಠ, ಸಿದ್ದು ಹಿರೇಮಠ, ಅಶೋಕ ರಾಠೋಡ, ಸಂಜು ಬಾಗೇವಾಡಿ, ನಿಖಿಲ್ ಮಲಗಲದಿನ್ನಿ, ರವಿ ಹವಾಲ್ದಾರ್, ಮದನ್ ಕುಲಕರ್ಣಿ, ಸುರೇಶ ಕುಲಕರ್ಣಿ, ಗುರುರಾಜ ಕುಲಕರ್ಣಿ, ಮಹೇಶ ತೇಲಂಗಿ, ಅನೀಲ ಕುಲಕರ್ಣಿ, ವಿಠ್ಠಲ ದೇಶಪಾಂಡೆ, ಅಶೋಕ ಚಿನಿವಾರ, ರಾಜಶೇಖರ ಮ್ಯಾಗೇರಿ ಇದ್ದರು.
ಎರಡು ವರ್ಷಗಳ ಹಿಂದೆ ನನ್ನ ಮಗಳು ಅಪೇಕ್ಷಾ ಸಿಇಟಿ ಪರೀಕ್ಷೆ ಬರೆಯಲು ಸಿಂದಗಿಯ ಪರೀಕ್ಷಾ ಕೇಂದ್ರವೊಂದಕ್ಕೆ ಹೋದಾಗ ಆಕೆಯ ತಾಳಿ, ಕಿವಿಯೋಲೆ ಬಿಚ್ಚಿಸಿದ್ದರು. ನಿಯಮ ಇರಬಹುದು ಎಂದು ಪ್ರತಿರೋಧ ತೋರದೆ ಸುಮ್ಮನಿದ್ದೆವು. -ನಾರಾಯಣ ದುರ್ವೆ, ಗೋಂಧಳಿ ಸಮಾಜದ ಮುಖಂಡ, ಮುದ್ದೇಬಿಹಾಳ