

ಮಂಡ್ಯ: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ ಎನ್ನುವಂತೆ ತಮಿಳುನಾಡಿಗೆ ಧಾರಾಳವಾಗಿ ನೀರು ಹರಿಸಿದ ರಾಜ್ಯ ಸರ್ಕಾರಕ್ಕೆ ತಡವಾಗಿ ಎಚ್ಚರಿಕೆಯಾದಂತಿದೆ. ಮೊದಲೇ ಮಳೆಯಾಗದೇ ಸಂಕಷ್ಟದ ಪರಿಸ್ಥಿತಿ ಇರುವಾಗ ವಾಸ್ತವತೆಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನದಟ್ಟು ಮಾಡಲಿಲ್ಲ. ಇದೀಗ ಸರ್ವಪಕ್ಷಗಳ ಸಭೆ ಕರೆದು ಕೇಂದ್ರಕ್ಕೆ ನಿಯೋಗ ತೆರಳುವ ನಿರ್ಧಾರ ಘೋಷಿಸಿದೆ.
ಈ ವರ್ಷ ಜಿಲ್ಲೆಯಲ್ಲಿ ಸರಿಯಾಗಿ ಮಳೆಯ ದರ್ಶನ ಆಗಲಿಲ್ಲ. ಆದರೂ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕೆಲದಿನ ಉತ್ತಮ ಮಳೆಯಾದ ಪರಿಣಾಮ ಕೆಆರ್‌ಎಸ್ ಡ್ಯಾಂಗೆ ನೀರು ಹರಿದುಬಂತು. ಅಂತೆಯೇ 113 ಅಡಿಗೆ ತಲುಪಿತ್ತು. ಇದರಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಯಿತು. ಆದರೆ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವೆಂದು ರಾಜ್ಯಸರ್ಕಾರ ಆ.14ರಿಂದ ಪ್ರತಿದಿನ 10 ರಿಂದ 12 ಕ್ಯೂಸೆಕ್‌ನಂತೆ ತ.ನಾಡಿಗೆ ನೀರು ಹರಿಸಿತು. ಈ ಅವಧಿಯಲ್ಲಿ ಸುಮಾರು 13 ಟಿಎಂಸಿ ನೀರು ತ.ನಾಡಿನ ಮಡಿಲು ಸೇರಿಕೊಂಡಿತು. ಶನಿವಾರ ಡ್ಯಾಂನ ನೀರಿನಮಟ್ಟ 101 ಅಡಿ ತಲುಪಿದೆ.
ಇತ್ತ ನೀರು ಸಿಗುವ ಭರವಸೆ ಮೇರೆಗೆ ಜಿಲ್ಲೆಯ ಜನರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸಿದರು. ಅಂತೆಯೇ ರಾಜ್ಯಸರ್ಕಾರ ಕೂಡ ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ಭರವಸೆ ನೀಡಿದೆ. ಆದರೆ ಅತ್ತ ತ.ನಾಡಿಗೆ ನೀರು ಹರಿಸಿದ ಮೇಲೆ ಜಿಲ್ಲೆಯ ಬೆಳೆಗೆ ಕೊಡುತ್ತಾರೋ, ಇಲ್ಲವೋ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಇನ್ನು ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ಉತ್ತಮ ಮಳೆಯಾಗಬೇಕಿರುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಡಿಸೆಂಬರ್ ಅಂತ್ಯಕ್ಕೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಸಾಧ್ಯತೆ ದಟ್ಟವಾಗಿದೆ.
ಶುರುವಾಗಿದೆ ನೀರಿನ ಲೆಕ್ಕಾಚಾರ: ಪ್ರಸ್ತುತ ಕೆಆರ್‌ಎಸ್ ಡ್ಯಾಂನಲ್ಲಿ 101 ಅಡಿಯಷ್ಟು ನೀರಿನ ಸಂಗ್ರಹವಿದೆ. ಒಳಹರಿವು 2,461 ಕ್ಯೂಸೆಕ್ ಇದ್ದರೆ, ಡ್ಯಾಂನಿಂದ 3,897 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡುವುದಾದರೆ 49.454 ಟಿಎಂಸಿ ಗರಿಷ್ಟ ಸಂಗ್ರಹದ ಡ್ಯಾಂನಲ್ಲಿ ಸಧ್ಯ ಸುಮಾರು 24 ಟಿಎಂಸಿ ನೀರಿದೆ. ಇದರಲ್ಲಿ ಐದು ಟಿಎಂಸಿಯಷ್ಟು ನೀರು ಡೆಡ್ ಸ್ಟೋರೆಜ್ ಆಗುವುದರಿಂದ ಬಳಕೆ ಮಾಡುವಂತಿಲ್ಲ.
ಇನ್ನು ಕಾವೇರಿ ಜಲಾಯನ ಪ್ರದೇಶದ ಡ್ಯಾಂಗಳಿಂದ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆಂದು ಪ್ರತಿನಿತ್ಯ ಸುಮಾರು 1,200 ಕ್ಯೂಸೆಕ್ ನೀರನ್ನು ಕೊಡಲಾಗುತ್ತಿದೆ. ಅಂದರೆ ತಿಂಗಳಿಂದ ಸುಮಾರು ಎರಡೂವರೆ ಟಿಎಂಸಿಯಷ್ಟು ಬೇಕಿದೆ. ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್‌ವರೆಗೆ ಕುಡಿಯುವ ನೀರಿಗೂ ಸುಮಾರು 10 ಟಿಎಂಸಿ ನೀರಿನ ಅವಶ್ಯಕತೆ ಇದೆ. ಒಂದು ವೇಳೆ ಮಳೆಯಾಗದಿದ್ದರೆ ಬೇಸಿಗೆಗೆ ಪರಿಸ್ಥಿತಿ ಗಂಭೀರವಾಗುವುದು ನಿಶ್ಚಿತ. ಇನ್ನು ಬೆಳೆಗೆ ತೀರಾ ಕಷ್ಟವಾಗಲಿದೆ.
ಈ ಹಿನ್ನೆಲೆಯಲ್ಲಿ ಡ್ಯಾಂನಲ್ಲಿರುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಸಮರ್ಥವಾದ ವಾದ ಮಂಡಿಸುವುದು ಅವಶ್ಯಕವಾಗಿದೆ. ತ.ನಾಡು ಬೆಳೆಗೆಂದು ನೀರು ಕೇಳುತ್ತಿದೆ. ಆದರೆ ಇಲ್ಲಿ ಕುಡಿಯುವುದಕ್ಕೆ ಸಮಸ್ಯೆಯಾಗುವ ಮುನ್ಸೂಚನೆ ಕಾಣುತ್ತಿದೆ. ಆದ್ದರಿಂದ ವಾಸ್ತವ ಪರಿಸ್ಥಿತಿಯನ್ನು ಮುಂದಿಡುವುದರ ಜತೆಗೆ ನೀರು ನಿರ್ವಹಣಾ ಪ್ರಾಧಿಕಾರವನ್ನು ಆಹ್ವಾನಿಸಿ ವಾಸ್ತವ ಸ್ಥಿತಿಯನ್ನು ತೋರಿಸಿ ಮನದಟ್ಟು ಮಾಡಬೇಕಾದ ಸಮರ್ಥ ಹೊಣೆಯನ್ನು ರಾಜ್ಯಸರ್ಕಾರ ಮಾಡಬೇಕಿದೆ.