ತಪ್ಪಿಲ್ಲದಿದ್ದರೆ ಸಿಎಂ ತನಿಖೆ ಎದುರಿಸಲಿ

18 ckm 2 c.t.ravi
ಸುದ್ದಿಗಾರರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು.
Published on

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಮಾತ್ರ ರಾಜ್ಯಪಾಲರು ಆದೇಶ ನೀಡಿದ್ದಾರೆಯೇ ಹೊರತು ಜಡ್ಜ್ ಮೆಂಟ್ ನೀಡಿಲ್ಲ. ಸಿಎಂ ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆಯನ್ನು ಎದುರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆ ಎದುರಿಸಲು ಏಕೆ ಹೆದರಬೇಕು ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಭಯಪಡುತ್ತಿರುವುದನ್ನು ನೋಡಿದರೆ ಭ್ರಷ್ಟಾಚಾರ ನಡೆಸಿದ್ದೀರಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದೀರಿ ಹಾಗೂ ನಡೆದಿರುವ ಅಕ್ರಮವನ್ನು ಮುಚ್ಚಿಹಾಕಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರಿ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
೨೦೧೧ರಲ್ಲಿ ಯಡಿಯೂರಪ್ಪ ಅವರ ವಿರುದ್ಧವು ಅಂದಿನ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರೇ ರಾಜ್ಯಪಾಲರ ಆದೇಶವನ್ನು ಸ್ವಾಗತ ಮಾಡಿದ್ದರು. ಜೊತೆಗೆ ಭ್ರಷ್ಟರು ಮಾತ್ರ ಭಯ ಬೀಳುತ್ತಾರೆ ಎಂದು ಹೇಳಿದ್ದರು. ಇದಲ್ಲದೆ ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕಾಗಿಯೇ ಭಯಪಡುತ್ತಿದ್ದಾರೆ ಎಂದೂ ಹೇಳಿದ್ದರು. ಅಂದು ನೀವು ಹೇಳಿದ ಮಾತುಗಳನ್ನೇ ಇಂದು ನಾವು ಹೇಳಬಹುದಲ್ಲವೇ ಎಂದು ಪ್ರಶ್ನಿಸಿದರು.
ಸಿಎಂ ಸೀತಾರಾಮಯ್ಯ ವಿರುದ್ಧ ಮೂರು ಜನ ದೂರು ಸಲ್ಲಿಸಿದ್ದರು. ದೂರಿಗೆ ಸಂಬAಧಿಸಿದAತೆ ನೋಟಿಸ್ ನೀಡಿ ಸರ್ಕಾರದಿಂದ ಸುದೀರ್ಘ ಉತ್ತರ ಪಡೆದ ನಂತರವೇ ದೂರುದಾರರ ದಾಖಲೆ ಪರಿಶೀಲನೆ ನಡೆಸಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ೧೯೫೧ರಲ್ಲಿ ಇದ್ದ ಸಂವಿಧಾನವೇ ಈಗಲೂ ಇದೆ. ಸಿಎಂ ಸೇರಿದಂತೆ ಕಾಂಗ್ರೆಸ್ಸಿಗರು ಸಂವಿಧಾನಕ್ಕಿAತ ಮೇಲಲ್ಲ. ಎಲ್ಲರೂ ಸಂವಿಧಾನದೊಳಗೇ ಬರುತ್ತೀರಿ. ಸಿಎಂ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬಾರದೇ? ತನಿಖೆಯನ್ನು ಏಕೆ ವಿರೋಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ರಾಮಕೃಷ್ಣ ಹೆಗಡೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ತನಿಖೆ ಎದುರಿಸಿದ್ದರು ಎಂಬುದನ್ನು ಕಾಂಗ್ರೆಸ್ಸಿಗರು ಮನಗಾಣಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net