ಪುಣ್ಯ ಇಲ್ಲದಿದ್ದರೆ ಪರಮಾತ್ಮ ಕೊಟ್ಟರೂ ಅನುಭವಿಸಲು ಅಸಾಧ್ಯ

nrp guru
ಎನ್.ಆರ್.ಪುರ ಅಗ್ರಹಾರದ ಅನ್ನಪೂರ್ಣಮ್ಮ ರಂಗನಾಥ್ ರಾವ್ ಸಭಾಂಗಣದಲ್ಲಿ ಎಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಎನ್.ಆರ್.ಪುರ: ಶಂಕರಾಚಾರ್ಯರು ಸ್ತೋತ್ರಗಳಲ್ಲಿ ಹೇಳಿರುವಂತೆ ಪುಣ್ಯ ಇಲ್ಲದಿದ್ದರೆ ಪರಮಾತ್ಮ ಕೊಟ್ಟರೂ ಅನುಭವಿಸಲು ಸಾಧ್ಯವಿಲ್ಲ. ಪರಮಾತ್ಮನ ಸೇವೆಗೆ ನಾನಾ ಮುಖಗಳಿವೆ. ಸ್ತೋತ್ರದ ಪಾರಾಯಣವೇ ಶ್ರೇಷ್ಠ ಸೇವೆ. ನಿಜವಾದ ಭಕ್ತನಾಗುವುದೇ ಶ್ರೇಷ್ಠ. ಆತ್ಮ ಜ್ಞಾನಿಗಳು ಭಗವಂತನಿಗೆ ಪ್ರಿಯವಾಗಿರುತ್ತಾರೆ ಎಂದು ಕೆ.ಆರ್.ನಗರ ಎಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

ಅಗ್ರಹಾರ ಅನ್ನಪೂರ್ಣಮ್ಮ ರಂಗನಾಥ್ ರಾವ್ ಸಭಾಂಗಣದಲ್ಲಿ ಶಾಂಕರ ತತ್ವ ಪ್ರಸಾರ ಅಭಿಯಾನ ಹಾಗೂ ಕಲ್ಯಾಣವೃಷ್ಟಿ ಅಭಿಯಾನದಿಂದ ಹಮ್ಮಿಕೊಂಡಿದ್ದ ಕಲ್ಯಾಣವೃಷ್ಟಿ ಸಮರ್ಪಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶೃಂಗೇರಿ ಶ್ರೀಗಳು ಸನ್ಯಾಸತ್ವ ಸ್ವೀಕಾರ ಮಾಡಿ 50 ವರ್ಷಗಳು ಸಂದ ಪ್ರಯುಕ್ತ ಶಾಂಕರ ತತ್ವ ಪ್ರಸಾರ ಹಾಗೂ ಕಲ್ಯಾಣವೃಷ್ಟಿ ಅಭಿಯಾನ ಆರಂಭಿಸಲಾಗಿದೆ ಎಂದರು.
ಶೃಂಗೇರಿ ಶ್ರೀಗಳು ಬಾಲ್ಯದಲ್ಲಿಯೇ ವೇದಾಧ್ಯಯನ, ಶಾಸ್ತ್ರಾಧ್ಯಯನ ಮಾಡಿದ ರೀತಿ ಅದ್ಭುತ. ಸನ್ಯಾಸತ್ವದ ಎಲ್ಲ ಧರ್ಮಗಳನ್ನೂ ಪಾಲಿಸಿಕೊಂಡು ಬಂದವರು. ಶೃಂಗೇರಿ ಶ್ರೀಗಳಿಗೆ 70 ವರ್ಷವಾದರೂ ಅಧ್ಯಯನ, ಅಧ್ಯಾಪನ ಬಿಟ್ಟಿಲ್ಲ. ಅವರು ಸನ್ಯಾಸತ್ವ ಸ್ವೀಕರಿಸಿದ 50 ವರ್ಷಗಳ ಕುರಿತು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಶಾಂಕರ ತತ್ವ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಶ್ರೀಗಳು ಜಗನ್ಮಾತೆ, ಈಶ್ವರ, ವಿಷ್ಣುವಿನ ಸ್ತೋತ್ರಗಳನ್ನು ಒಳಗೊಂಡ ಕಲ್ಯಾಣ ವೃಷ್ಟಿತೋತ್ಸವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಹಾಗೂ ಕರವಾಲಂಬ ಸ್ತೋತ್ರ(ಲಕ್ಷ್ಮೀ ನರಸಿಂಹ ಸ್ತೋತ್ರ) ಎಂಬ ಕಲ್ಯಾಣ ಪರಂಪರೆ ಉಂಟುಮಾಡುವ ಸ್ತೋತ್ರಗಳ ಪಾರಾಯಾಣ ಮಾಡುವಂತೆ ಸೂಚಿಸಿದ್ದಾರೆ ಎಂದರು.
ಶಿವಪಂಚಾಕ್ಷರ ನಕ್ಷತ್ರಾ ಮಾಲಾ ಸ್ತೋತ್ರ ಪಾರಾಯಣ ಮಾಡುವವರು ಚಂದ್ರನ ಸ್ಥಾನ ಪಡೆಯುತ್ತಾರೆ. ಲಕ್ಷ್ಮೀ ನರಸಿಂಹ ಸ್ತೋತ್ರ ಪಾರಾಯಣ ಮಾಡುವುದರಿಂದ ಭೀತಿಮುಕ್ತರನ್ನಾಗಿಸುತ್ತದೆ. ಕೆಡುಕುಗಳು, ಅವಘಡಗಳು ಸಂಭವಿಸುವುದಿಲ್ಲ. ಬೆಂಗಳೂರಿನಲ್ಲಿ 2 ಲಕ್ಷ, ಮೈಸೂರಿನಲ್ಲಿ 1 ಲಕ್ಷ ಜನರಿಗೆ ಶಾಂಕರರ ತತ್ವಗಳ ಅರಿವು ಮೂಡಿಸುವ, ಕಲ್ಯಾಣವೃಷ್ಟಿತೋತ್ಸವ ಸ್ತೋತ್ರ ಪಾರಾಯಣ ಮಾಡಿಸುವ ಗುರಿ ಹೊಂದಲಾಗಿದೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 50 ಸಾವಿರ ಜನರು ಕಲ್ಯಾಣವೃಷ್ಟಿತೋತ್ಸವ ಸ್ತೋತ್ರ ಪಾರಾಯಣ ಮಾಡಿ ನ.10ರೊಳಗೆ ಶೃಂಗೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮರ್ಪಣೆ ಮಾಡಬೇಕು. ಪುರುಷರು ಪಾರಾಯಣ ಮಾಡುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಶಾಂಕರ ತತ್ವ ಅಭಿಯಾನದ ತಾಲೂಕು ಸಂಚಾಲಕ ಎನ್.ಶ್ರೀನಾಥ್ ಮಾತನಾಡಿ, ಕಲ್ಯಾವೃಷ್ಟಿತೋತ್ಸವ ಪಾರಾಯಣ ಮಾಡಿರುವವರು ಸ್ವಾಮೀಜಿ ಸಮ್ಮುಖದಲ್ಲಿ ಸಮರ್ಪಣೆ ಮಾಡಿಕೊಂಡು ಆಶೀರ್ವಾದ ಪಡೆದುಕೊಳ್ಳಬೇಕು ಎಂದರು.
ಶಾಂಕರಿ ತತ್ವ ಅಭಿಯಾನದ ಜಿಲ್ಲಾ ಅಧ್ಯಕ್ಷ ರಾಮಪ್ರಸಾದ್, ಕೊಪ್ಪ ಸಹ ಸಂಚಾಲಕ ರವಿ ಪಟವರ್ಧನ್, ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್, ವಾಸಂತಿ, ಅನಿತಾ ಶ್ರೀನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net