ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ನೀಡಲಿ

19Koppa02
Published on

ಕೊಪ್ಪ: ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಬಸ್‌ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರು ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಸಿದ್ದರಾಮಯ್ಯ ಅವರು ನೈತಿಕತೆ ಬಗ್ಗೆ ಮಾತನಾಡುತಿದ್ದರು. ಈಗ ನೈತಿಕತೆ ಎಲ್ಲಿದೆ ಎಂದು ಯೋಚಿಸಬೇಕಿದೆ ಎಂದರು.
ಉತ್ತಮ ಆಡಳಿತ ಮಾಡುತ್ತಾರೆ ಎಂದು ಕಾಂಗ್ರೆಸ್‌ಗೆ ಜನ 135 ಸೀಟು ಗೆಲ್ಲಿಸಿಕೊಟ್ಟರು. ಸಮಾಜವಾದಿ ಬದಲಾಗಿ ಮಜವಾದಿ ಮಾತ್ರ ಉಳಿದಿದೆ. ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ, ತನಿಖೆಯಿಂದ ಮುಕ್ತರಾಗಿ ಬಂದು ಮತ್ತೆ ಮುಖ್ಯಮಂತ್ರಿಯಾಗಿ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಯಡಿಯೂರಪ್ಪನವರ ಮೇಲೆ ತನಿಖೆಗೆ ಆದೇಶವಾದಾಗ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ೆನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಹಗಲು ದರೋಡೆ, ಮುಡಾದಲ್ಲಿ ಸ್ವಜನ ಪಕ್ಷಪಾತದಿಂದ ಕೂಡಿದ ಭ್ರಷ್ಟಾಚಾರವಾಗಿದೆ. ರಾಜ್ಯಪಾಲರು ಪರಿಶೀಲಿಸಿಯೇ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ 80 ಸಾವಿರ ಜನ ಅರ್ಜಿಹಾಕಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಲೂಟಿ ಹೊಡೆದು ಸುರ್ಜೆವಾಲರ ಜೇಬು ತುಂಬಿಸುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.
ಮುಖಂಡ ಎಚ್.ಎಂ.ರವಿಕಾಂತ್, ಅರುಣ್ ಶಿವಪುರ, ದಿವಾಕರ ಭಟ್, ಎಚ್.ಆರ್.ಜಗದೀಶ್, ಜಯಂತ್, ಎಂ.ಕೆ..ಕಿರಣ್ ಮಡಬಳ್ಳಿ, ಅಜಿತ್‌ಬಿಕ್ಕಳಿ, ಇದಿನಬ್ಬ, ಲಲಿತ ನಾಗೇಂದ್ರ, ರೇಖಾಪ್ರಕಾಶ್, ಪದ್ಮಾವತಿ ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net