ನೀರಾವರಿ ಸೌಲಭ್ಯವಿದ್ದರೆ ರೈತ ನಾಡಿಗೆ ಅನ್ನ, ಆಹಾರ ನೀಡಬಲ್ಲ

28-HNL-1 Prashant Joshi
Published on

ಹಾನಗಲ್ಲ: ಜಮೀನಿಗೆ ನೀರಾವರಿ ಸೌಲಭ್ಯ ಇದ್ದರೆ ರೈತ ಕೊಡುಗೈ ದಾನಿಯಾಗಿ ನಾಡಿಗೆ ಅನ್ನ, ಆಹಾರ ನೀಡಿ ಸಾಕಿ ಸಲುಹಬಲ್ಲ, ಆಧುನಿಕ ರಾಸಾಯನಿಕ ಕೃಷಿಯಿಂದ ಆತಂಕದ ಮೇಲೆ ಆತಂಕ ಎದುರಿಸುತ್ತಿರುವ ರೈತನಿಗೆ ನಮ್ಮ ಮೂಲ ಕೃಷಿಯ ಜ್ಞಾನ ಅತ್ಯಗತ್ಯ ಎಂದು ಸಾವಯವ ಕೃಷಿ ತಜ್ಞ ಸಿದ್ದಾಪುರ ತಾಲೂಕಿನ ಶಿವಳ ಮನೆಯ ಪ್ರಶಾಂತ ಜೋಶಿ ಹೇಳಿದರು.

ಬುಧವಾರ ತಾಲೂಕಿನ ಸಾಂವಸಗಿಯಲ್ಲಿ ರೈತರು ಆಯೋಜಿಸಿದ್ದ ಬದಲಾದ ಕಾಲಕ್ಕೆ ಬದಲಾದ ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹಿತ, ಮಿತ ನೀರು ಆಹಾರ ನೀಡುವ ಮೂಲಕ ಒಂದು ಎಕರೆಯಲ್ಲಿ ಹತ್ತಾರು ಲಕ್ಷ ರೂ. ಆದಾಯ ಪಡೆಯಲು ಸಾಧ್ಯ. ಆದರೆ, ರೈತ ತಾಳ್ಮೆ ಕಳೆದುಕೊಳ್ಳದೆ ಭೂಮಿಯನ್ನು ಗೌರವಿಸಿ ಪ್ರೀತಿಯಿಂದ ದುಡಿಯಬೇಕು. ಇತ್ತೀಚಿನ ದಿನಗಳಲ್ಲಿ ಸಾಂಬಾರ ಪದಾರ್ಥಗಳು ಹಾಗೂ ಔಷಧ ಸಸ್ಯಗಳಿಗೆ ಬಹು ದೊಡ್ಡ ಬೇಡಿಕೆ ಇದೆ. ರಾಸಾಯನಿಕ ಇಲ್ಲದೆ ಬೆಳೆದ ಬೆಳೆಗಳಿಗೆ ಮನೆ ಬಾಗಿಲಲ್ಲೇ ಗ್ರಾಹಕರು ಸಿಗುತ್ತಾರೆ. ಆದರೆ, ಬೇಗ ಹಣ ಮಾಡಲು ಹೋಗಿ ಭೂಮಿಯನ್ನು ಹಾಳು ಮಾಡಿಕೊಂಡು ಕೊರಗುವ ಸ್ಥಿತಿಯ ಅತ್ಯಂತ ಹತ್ತಿರ ಈಗ ನಾವಿದ್ದೇವೆ. ಇದೆಲ್ಲವೂ ಬದಲಾಗಲು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.

ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ವಿಚಾರದಲ್ಲಿ ಸಸಿಗಳ ಆಯ್ಕೆ, ನೀರು, ಪೋಷಕಾಂಶಗಳ ನಿರ್ವಹಣೆ ಸರಿಯಾಗಿ ತಿಳಿದಿರಬೇಕು. ನೀರನ್ನು ಯಥೇಚ್ಛವಾಗಿ ಬಳಸುವುದು ಸಸ್ಯಗಳಿಗೆ ಹಲವು ಸಂದರ್ಭದಲ್ಲಿ ಹಾನಿಕಾರಕವಾದುದು. ಹಿತ, ಮಿತ ನೀರು ಪೋಷಕಾಂಶವನ್ನು ಕಡಿಮೆ ವೆಚ್ಚಲ್ಲಿ ನೀಡಬೇಕು. ಎಲ್ಲದಕ್ಕೂ ಮಾರುಕಟ್ಟೆ ಅವಲಂಬಿಸುವುದು ಬೇಡ. ಮನೆಯಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಸಿದ್ದಗೊಳಿಸಿಕೊಳ್ಳುವ ಮಾಹಿತಿ ಇದೆ. ಅದರಂತೆ ಶ್ರಮವಹಿಸಿದರೆ ರೈತ ದುಂದು ವೆಚ್ಚವಿಲ್ಲದೆ ಸೌಖ್ಯದಿಂದ ಉತ್ತಮ ಬೆಳೆ ಬೆಳೆಯಬಲ್ಲ ಎಂದರು.

ಕೃಷಿ ಔಷಧ ತಜ್ಞ ಶಿವಮೊಗ್ಗದ ಗಣೇಶ ಹೆಗಡೆ ಮಾತನಾಡಿ, ಮನೆ ಮದ್ದು ಹೇಗೆ ಮನುಷ್ಯನಿಗೆ ಮನೆಯಲ್ಲಿ ಎಲ್ಲ ಔಷಧ ನೀಡಬಲ್ಲದೋ, ಹಾಗೆಯೇ ನಮ್ಮ ಸುತ್ತಲ ಪರಿಸರದಲ್ಲಿಯೇ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಬರುವ ರೋಗ ಬಾಧೆಯನ್ನು ತಡೆಗಟ್ಟುವ ಔಷಧ ಸಿದ್ಧಗೊಳಿಸಿಕೊಳ್ಳಲು ಸಾಧ್ಯ. ರಾಸಾಯನಿಕಗಳ ಬಳಕೆಗೆ ಮಿತಿ ಹಾಕಬೇಕು. ಆದರೆ, ಕೆಲವು ಸಂದರ್ಭಗಳಲ್ಲಿ ರಾಸಾಯನಿಕಗಳು ಬೇಕಾಗುತ್ತವೆ. ಆದರೆ, ಅವನ್ನೇ ಮೂಲ ಔಷಧಿಯಾಗಿ ಬಳಸುವುದು ಬೇಡ ಎಂದರು.

ಸಾವಯವ ಕೃಷಿ ತಜ್ಞ ಉಲ್ಲಾಸ ಶಿರೂರ ಮಾತನಾಡಿ, ಯಾವುದೇ ಒತ್ತಡ ಅಮಿಷಗಳನ್ನು ಒಡ್ಡಿ ರೈತರನ್ನು ಮೋಸಗೊಳಿಸುವ ಔಷಧ, ಪೋಷಕಾಂಶಗಳನ್ನು ಮಾರುವವರ ಬಗ್ಗೆ ಎಚ್ಚರಿಕೆಯಿಂದಿರಬೇಕಾಗಿದೆ. ನಾವೆಲ್ಲ ರೈತರು ಆಗಾಗ ಒಂದೆಡೆ ಸೇರಿ ರ್ಚಚಿಸಿದರೆ ನಮ್ಮಲ್ಲಿಯೇ ಎಲ್ಲ ರೋಗಕ್ಕೆ ಪರಿಹಾರ, ಉತ್ತಮ ಬೆಳೆಗೆ ಮಾರ್ಗದರ್ಶನ ಸಿಗುತ್ತದೆ. ರೈತರು ಒಟ್ಟಾಗಿ ಮುನ್ನಡೆದರೆ ಎಲ್ಲ ಯಶಸ್ಸು ಸಾಧ್ಯ ಎಂದರು.

ರೈತರಾದ ಚಂದ್ರಣ್ಣ ಗೂಳಿ, ಸಿದ್ದಲಿಂಗೇಶ ವಳಸಂಗದ, ಮಾರುತಿ ಶಿಡ್ಲಾಪೂರ, ಶಿವಾನಂದ ಕೊಪ್ಪದ, ಶಿವರುದ್ರಪ್ಪ ಅಗಸನಹಳ್ಳಿ, ಕೆ.ಪಿ. ದೊಡ್ಡಮನಿ, ಮಂಜು ದೊಡ್ಡಮನಿ, ಯುವರಾಜ ಶಿಡ್ಲಾಪುರ, ಚನ್ನಪ್ಪ ಚಂದ್ರಗೇರಿ, ಚಂದ್ರಣ್ಣ ಉಗ್ರಣ್ಣನವರ, ಶರಣಪ್ಪ ಕಾಲ್ವೆಕಲ್ಲಾಪುರ, ಲಿಂಗರಾಜ ಬೆಣ್ಣಿ, ರಾಘವೇಂದ್ರ ಕರಿಭೀಮಣ್ಣನವರ, ಶಂಕ್ರಪ್ಪ ಪೂಜಾರ, ಮಾರುತಿ ನಂದಿಕೊಪ್ಪ ಸೇರಿ ರೈತರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net