

ದಾಂಡೇಲಿ: ಹುಟ್ಟು-ಸಾವು ಭಗವಂತನ ಕೈಯಲ್ಲಿ ಇದೆ. ಆದರೆ ಈ ಹುಟ್ಟು ಸಾವಿನ ಮಧ್ಯದ ಅವಕಾಶದಲ್ಲಿ ಉತ್ತಮ ಕಾರ್ಯಮಾಡಿ ಹೆಸರು ಅಮರವಾಗಿ ಉಳಿಯುವಂತೆ ಮಾಡಬೇಕು ಎಂದು ಮುಗಳಕೋಡದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರಗರಾಜೇಂದ್ರ ಮಹಾಸ್ವಾಮಿಗಳು ನುಡಿದರು.
ನಗರದಲ್ಲಿ ಮುಗಳಖೋಡ ಯೆಲ್ಲಾರಲಿಂಗೇಶ್ವರ ಶಾಖಾ ಮಠವನ್ನು ಭಾನುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಇದ್ದಲ್ಲಿ ಭಗವಂತ ಇರುತ್ತಾನೆ. ದಾಂಡೇಲಿ ಜನರ ಭಕ್ತಿಯಿಂದ ಹಾಗೂ ಯೆಲ್ಲಾರಲಿಂಗೇಶ್ವರರ ಕೃಪೆಯಿಂದ ಶಾಖೆ ಆರಂಭವಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಶಾಖಾಮಠದಲ್ಲಿ ಜಾತ್ರೆ ಏರ್ಪಡಿಸಲಾಗುವುದು ಎಂದರು.
ಬಿಜಾಪುರದ ಅಹೇರಿ ಮಠದ ಸಂಜಯ ಮಹಾರಾಜ ಸ್ವಾಮೀಜಿ, ದಾಂಡೇಲಿ ಶಾಖಾ ಮಠದ ಉಸ್ತುವಾರಿ ಭಕ್ತ ಅಮೋಗಿ ಮದರಿ ಉಪಸ್ಥಿತರಿದ್ದರು. ಸ್ವಾಮೀಜಿಯವರನ್ನು ಸಮಿತಿಯವರು ಸನ್ಮಾನಿಸಿದರು. ಶಾಖಾ ಮಠದ ಉದ್ಘಾಟನಾ ಸಮಿತಿಯ ಪ್ರಮುಖ ಶ್ರೀಮಂತ ಮದರಿ ಸ್ವಾಗತಿಸಿದರು, ಹನುಮಂತ ಕುಂಬಾರ ವಂದಿಸಿದರು.
ಮದನ ಹಲವಾಯಿ, ಬಸವರಾಜ ಮದರಿ ಶಾಬಾದಿ, ಹರಳಯ್ಯ ಲೋಗಾವಿ, ಬಸವರಾಜ ಮಾಶಾಳ, ಶ್ಯಾಮ ಶಾಖಾಪುರೆ ಇತರರು ಉಪಸ್ಥಿತರಿದ್ದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.